ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ಪಿಂಕ್ ಲೈನ್ ಲೋಕಾರ್ಪಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ತಾವರೆಕೆರೆ ಮೆಟ್ರೋ ನಿಲ್ದಾಣದ ಹೆಸರಿನ ಬದಲಾವಣೆ ಕುರಿತು ಭರ್ಜರಿ ಚರ್ಚೆ ನಡೆಯುತ್ತಿದೆ.
ಒಂದೆಡೆ ಸ್ಥಳೀಯ ನಿವಾಸಿಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ನಿಲ್ದಾಣಕ್ಕೆ ‘ಬಿಸ್ಮಿಲ್ಲಾ ನಗರ’ ಎಂದು ಹೆಸರಿಡುವಂತೆ ಬೇಡಿಕೆ ಇಟ್ಟಿದ್ದರೆ, ಮತ್ತೊಂದೆಡೆ ಬಿಟಿಎಂ ಲೇಔಟ್ ಶಾಸಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ಇದೇ ನಿಲ್ದಾಣಕ್ಕೆ ‘ಎಸ್.ಜಿ. ಪಾಳ್ಯ’ ಎಂದು ಮರುನಾಮಕರಣ ಮಾಡುವಂತೆ ಪ್ರಸ್ತಾಪಿಸಿದ್ದಾರೆ.
‘ಬಿಸ್ಮಿಲ್ಲಾ ನಗರ–ತಾವರೆಕೆರೆ’ಯಾದರು ಇಡಿ
ಸ್ಥಳೀಯ ನಿವಾಸಿಗಳು ಹಾಗೂ ಸಮುದಾಯದ ಮುಖಂಡರ ನಿಯೋಗವೊಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಕೊನೆ ಪಕ್ಷ ಸಂಪೂರ್ಣ ಹೆಸರು ಬದಲಾವಣೆ ಮಾಡೋಕೆ ಸಾಧ್ಯವಾಗದಿದ್ದರೆ ‘ಬಿಸ್ಮಿಲ್ಲಾ ನಗರ–ತಾವರೆಕೆರೆ’ ಎಂಬ ಜಂಟಿ ಹೆಸರನ್ನಾದರೂ ಇಡುವಂತೆ ನಿಯೋಗ ಒತ್ತಾಯ ಮಾಡಿದೆ.
ಇದನ್ನೂ ಓದಿ:
ರಾಮಲಿಂಗಾರೆಡ್ಡಿ ಮನವಿ
ಆದರೆ ಇದೇ ತಾವರೆಕೆರೆ ನಿಲ್ದಾಣದ ಹೆಸರಿನ ಕುರಿತು ಶಾಸಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ಬೇರೆ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿರುವ ಅವರು, ತಾವರೆಕೆರೆ ನಿಲ್ದಾಣಕ್ಕೆ ‘ಎಸ್.ಜಿ. ಪಾಳ್ಯ’ ಎಂದು ಹೆಸರಿಡುವಂತೆ ಮನವಿ ಮಾಡಿದ್ದಾರೆ.
ಒಂದೇ ನಿಲ್ದಾಣಕ್ಕೆ ಎರಡು ವಿಭಿನ್ನ ಹೆಸರುಗಳ ಬೇಡಿಕೆ ಎದುರಾಗಿರುವುದು ಕುತೂಹಲ ಮೂಡಿಸಿದೆ. ಅಂತಿಮವಾಗಿ ಬಿಎಂಆರ್‌ಸಿಎಲ್ ಯಾವ ಹೆಸರನ್ನು ಪರಿಗಣಿಸಲಿದೆ ಎಂಬುದು ಇದೀಗ ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನ ಸೆಳೆದಿದೆ.



