July 23, 2026
Thursday, July 23, 2026
spot_img

ಕೈ ಬೆರಳುಗಳ ಮಧ್ಯೆ ವಿಪರೀತ ತುರಿಕೆ, ಕೆಂಪು ದದ್ದಾಗುತ್ತಿದೆಯೇ? ಹುಳುಕಡ್ಡಿ ಓಡಿಸಲು ಅಡುಗೆ ಮನೆಯಲ್ಲೇ ಇದೆ ಮದ್ದು!

ಹುಳುಕಡ್ಡಿ ಅಥವಾ ಗಜಕರ್ಣ ಎಂಬುದು ಒಂದು ಸಾಮಾನ್ಯವಾದ ಶಿಲೀಂಧ್ರ ಸೋಂಕಾಗಿದೆ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಅತಿಯಾದ ಬೆವರಿನ ಕಾರಣದಿಂದಾಗಿ ಚರ್ಮದ ಮೇಲೆ ಕೆಂಪು ಬಣ್ಣದ, ದುಂಡಗಿನ ಆಕಾರದ ತೀವ್ರ ತುರಿಕೆಯ ದದ್ದುಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಕೈ ಬೆರಳುಗಳ ಮಧ್ಯೆ ಅಥವಾ ಹಸ್ತದ ಮೇಲೆ ಇದು ಉಂಟಾದಾಗ ದೈನಂದಿನ ಕೆಲಸಗಳಿಗೆ ತೊಂದರೆಯಾಗುತ್ತದೆ.

ಆರಂಭಿಕ ಹಂತದ ಹುಳುಕಡ್ಡಿ ಸಮಸ್ಯೆಯನ್ನು ಮನೆಯಲ್ಲಿಯೇ ಇರುವ ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸಿ ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿಯೋಣ.

ಅರಿಶಿನ ಮತ್ತು ಬೇವಿನ ಎಣ್ಣೆ

ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶವು ಅತ್ಯುತ್ತಮ ಆಂಟಿಫಂಗಲ್ ಮತ್ತು ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿದೆ. ಕಹಿ ಬೇವು ಸೋಂಕು ಹರಡುವುದನ್ನು ತಡೆಯುತ್ತದೆ. ಅರಿಶಿನದ ಕೊಂಬನ್ನು ನೀರಿನೊಂದಿಗೆ ಅರೆದು ಪೇಸ್ಟ್ ಮಾಡಿ, ಅದಕ್ಕೆ ಕೆಲವು ಹನಿ ಬೇವಿನ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಹುಳುಕಡ್ಡಿ ಇರುವ ಜಾಗಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆದರೆ ತುರಿಕೆ ಕಡಿಮೆಯಾಗುತ್ತದೆ.

ತುಳಸಿ ಎಲೆಗಳ ರಸ

ತುಳಸಿಯು ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳ ವಿರುದ್ಧ ಹೋರಾಡುವ ನೈಸರ್ಗಿಕ ಶಕ್ತಿಯನ್ನು ಹೊಂದಿದೆ. ಹಸಿರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಜಜ್ಜಿ ರಸ ತೆಗೆದುಕೊಂಡು. ಈ ರಸವನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಸೋಂಕಿತ ಚರ್ಮದ ಮೇಲೆ ಮೃದುವಾಗಿ ಹಚ್ಚುತ್ತಾ ಬಂದರೆ ಹುಳುಕಡ್ಡಿ ಒಣಗತೊಡಗುತ್ತದೆ.

 ಸಾಸಿವೆ ಪೇಸ್ಟ್

ಸಾಸಿವೆ ಕಾಳುಗಳಲ್ಲಿ ಸಲ್ಫರ್ ಪ್ರಮಾಣ ಹೆಚ್ಚಾಗಿದ್ದು, ಇದು ಆಂಟಿ-ಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಸ್ವಲ್ಪ ಸಾಸಿವೆ ಕಾಳುಗಳನ್ನು ಬಿಸಿ ನೀರಿನಲ್ಲಿ ನೆನೆಸಿ, ಮೃದುವಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಗಜಕರ್ಣದ ಮೇಲೆ ಲೇಪಿಸಿ ಒಣಗಲು ಬಿಡಿ, ನಂತರ ಉಗುರುಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲವು ಚರ್ಮದ ಶಿಲೀಂಧ್ರ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಶುದ್ಧವಾದ ತೆಂಗಿನ ಎಣ್ಣೆಯನ್ನು ಹುಳುಕಡ್ಡಿ ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ. ಇದು ಚರ್ಮ ಒಣಗದಂತೆ ತಡೆದು, ತುರಿಕೆಯನ್ನು ತಕ್ಷಣವೇ ಶಮನ ಮಾಡುತ್ತದೆ.

ಅಲೋವೆರಾ

ಅಲೋವೆರಾ ಚರ್ಮಕ್ಕೆ ತಂಪು ನೀಡುವುದಲ್ಲದೆ ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ತಾಜಾ ಅಲೋವೆರಾ ಜೆಲ್ ಅನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಚ್ಚುವುದರಿಂದ ಚರ್ಮದ ಉರಿ ಮತ್ತು ಊತ ಕಡಿಮೆಯಾಗುತ್ತದೆ.

ಮುನ್ನೆಚ್ಚರಿಕೆಗಳು:

ಸೋಂಕಿತ ಜಾಗವನ್ನು ದಿನವೂ ಆಂಟಿಬ್ಯಾಕ್ಟೀರಿಯಲ್ ಸೋಪು ಮತ್ತು ನೀರಿನಿಂದ ತೊಳೆದು, ಸಂಪೂರ್ಣವಾಗಿ ಒಣಗಿಸಿ. ತೇವಾಂಶವಿದ್ದರೆ ಫಂಗಸ್ ಬೇಗನೆ ಹರಡುತ್ತದೆ.

ಹುಳುಕಡ್ಡಿ ಅಂಟುಜಾಡ್ಯ ಆಗಿರುವುದರಿಂದ ನೀವು ಬಳಸುವ ಟವೆಲ್, ಬಟ್ಟೆ, ಸೋಪುಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು.

ಒಂದು ವೇಳೆ 2 ವಾರಗಳ ಕಾಲ ಮನೆಮದ್ದು ಬಳಸಿದರೂ ಸೋಂಕು ಕಡಿಮೆಯಾಗದಿದ್ದರೆ ಅಥವಾ ಇಡೀ ಕೈಗೆ ಹರಡುತ್ತಿದ್ದರೆ ತಕ್ಷಣವೇ ಚರ್ಮರೋಗ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಆಂಟಿಫಂಗಲ್ ಕ್ರೀಮ್‌ಗಳನ್ನು ಬಳಸುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !