July 24, 2026
Friday, July 24, 2026
spot_img

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಜಿರಳೆಗಳೊಂದಿಗೆ ಪ್ರಯತ್ನ: ಹಾವೇರಿಯಲ್ಲಿ ಕಮಲ ಕಲಿಗಳ ಆಕ್ರೋಶ

ಹೊಸದಿಗಂತ ವರದಿ ಹಾವೇರಿ:

ಕಾಂಗ್ರೆಸ್ ಹಾಗೂ ಎಡಪಂಥೀಯ ಪಕ್ಷಗಳು ಹೋರಾಟದ ಹೆಸರಿನಲ್ಲಿ ದಿಲ್ಲಿ ಸಂಸತ್ತಿಗೆ ಮುತ್ತಿಗೆ ಹಾಕಿ, ದೇಶದಲ್ಲಿ ಅರಾಜಕತೆ ಸೃಷ್ಠಿಸಲು ಹೊರಟಿವೆ ಎಂದು ಆರೋಪಿಸಿ, ಯೂತ್ ಫಾರ್ ನೇಷನ್ ಹಾವೇರಿ ಘಟಕದ ನೇತೃತ್ವದಲ್ಲಿ ಶುಕ್ರವಾರ ನಗರದ ಜೆ.ಪಿ. ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ ದೇಶದ ಘನತೆ, ಗೌರವವನ್ನು ಎತ್ತಿ ಹಿಡಿಯುವಲ್ಲಿ ವಿದ್ಯಾರ್ಥಿ ಸಮುದಾಯ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಜಗತ್ತಿನ ಆರ್ಥಿಕತೆಯಲ್ಲಿ ೩ನೇ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿ ಹಾಗೂ ಭಾರತದ ವರ್ಚಸ್ಸನ್ನು ಕುಗ್ಗಿಸುವ ಹುನ್ನಾರವನ್ನು ಕಾಂಗ್ರೆಸ್ ಹಾಗೂ ಎಡ ಪಕ್ಷದವರು ಮಾಡುತ್ತಿದ್ದಾರೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಆಮ್ ಆದ್ಮಿ, ಸಮಾಜವಾದಿ ಪಕ್ಷಗಳು ಒಗ್ಗೂಡಿ ಜಿರಳೆ ಪಾರ್ಟಿ ಕಟ್ಟಿಕೊಂಡಿವೆ ಎಂದು ವಾಗ್ದಾಳಿ ನಡೆಸಿದರು.

ಅಂತಾರಾಷ್ಟ್ರೀಯ ಭಯೋತ್ಪಾದಕರನ್ನು ಸೇರಿಸಿಕೊಂಡು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯನ್ನು ಕಟ್ಟಿದ್ದಾರೆ. ಭಾರತದಲ್ಲಿ ಕಾಂಗ್ರೆಸ್ ಮತ್ತು ಎಡ ಪಂಥಿಯರಿಗೆ ಮುಖಭಂಗವಾಗಿದೆ. ಇದೀಗ ಜಿರಳೆ ಜನತಾ ಪಾರ್ಟಿಯ ನೆರಳಲ್ಲಿ ಎಡಪಂಥೀಯ ಪಕ್ಷಗಳೆಲ್ಲರೂ ಜಿರಳೆ ಆಗಿದ್ದಾರೆ. ಕಾಕ್ರೋಚ್ ಕಾಂಗ್ರೆಸ್ ಪಾರ್ಟಿ, ಕಾಕ್ರೋಚ್ ಆಮ್ ಆದ್ಮಿ, ಕಾಕ್ರೋಚ್ ಟಿಎಂಸಿ, ಡಿಎಂಕೆ ಹೀಗೆ ಹೆಸರು ಇಟ್ಟುಕೊಳ್ಳಬಹುದಿತ್ತು. ಮುಖ ತೋರಿಸುವ ಶಕ್ತಿ ಇವರಿಗೆ ಇಲ್ಲ ಎಂದು ಕಿಡಿಕಾರಿದರು.

ಯುವ ಜನರೇ ಎಚ್ಚೆತ್ತುಕೊಳ್ಳಿ:

ತಿರುಗೇಟು ನೀಡುವ ಶಕ್ತಿ ನಮ್ಮ ದೇಶದ ಯುವ ಜನತೆಯಲ್ಲಿ ಇದೆ. ಈ ಹೊಲಸು ಜಿರಳೆಯನ್ನು ಸತ್ಯನಾಶ ಮಾಡುವ ಶಕ್ತಿ ಯುವ ಜನರಲ್ಲಿದೆ. ಮೋದಿ ಅವರಿಗೆ ಸ್ವಂತ ಮನೆ, ಕಾರು, ಬಂಗ್ಲೆ, ಆಸ್ತಿ ಏನೂ ಇಲ್ಲ. ಇಡೀ ದೇಶವೇ ನನ್ನ ಕುಟುಂಬ, ಇಡೀ ದೇಶದ ಮಕ್ಕಳೇ ನನ್ನ ಮಕ್ಕಳು ಎಂದು ಅವರು ತಿಳಿದಿದ್ದಾರೆ. ಯುವ ಜನತೆ ಎಚ್ಚೆತ್ತುಕೊಂಡು ವಿಕೃತ ಮನಸ್ಸಿನ ಸಂಘಟನೆಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ನೀಟ್ ವಿಚಾರದಲ್ಲೂ ವಾಗ್ದಾಳಿ:

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ನೀಟ್ ಪರೀಕ್ಷೆ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ರಾಷ್ಟçದ್ರೋಹಿಗಳ ಜೊತೆ ಸೇರಿ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಸಿಬ್ಬಂದಿ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆಗಳನ್ನು ಸಹ ಅವರು ಖಂಡಿಸಿದರು.

ಸಂಸತ್ ಮೇಲೆ ಮುತ್ತಿಗೆ ಹಾಕಿ ದಾಳಿ ನಡೆಸುವುದು ಸರಿಯಲ್ಲ. ಕಾಂಗ್ರೆಸ್‌ನ ರಾಹುಲ್‌ಗಾಂಧಿ, ಅರವಿಂದ ಕೇಜ್ರಿವಾಲ್, ಅಖಿಲೇಶ ಯಾದವ, ಮಮತಾ ಬ್ಯಾನರ್ಜಿ ಹೀಗೆ ಎಡಪಂಥಿಯರು ಸೇರಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಇದನ್ನೂ ಓದಿ:

ಪ್ರತಿಭಟನೆಯಲ್ಲಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಭೋಜರಾಜ ಕರೂದಿ, ಡಾ.ಬಸವರಾಜ ಕೇಲಗಾರ ಮಾತನಾಡಿದರು. ಕಿರಣ್ ಕೊಳ್ಳಿ, ಸಿದ್ದರಾಜ ಕಲಕೋಟಿ, ಸಂತೋಷ ಆಲದಕಟ್ಟಿ, ಸಿದ್ದಣ್ಣ ಚಿಕ್ಕಬಿದರಿ, ನಿರಂಜನ ಹೇರೂರ, ಕಿರಣಕುಮಾರ ಕೋಣನವರ, ಗಂಗಾಧರ ಬಾಣದ, ವೆಂಕಟೇಶ ನಾರಾಯಣಿ, ನೀಲಪ್ಪ ಚಾವಡಿ, ವಿಜಯಕುಮಾರ ಚಿನ್ನಿಕಟ್ಟಿ, ಮೃತ್ಯುಂಜಯ ಮುಷ್ಠಿ, ರುದ್ರೇಶ ಚಿನ್ನಣ್ಣನವರ, ರೋಹಿಣಿ ಪಾಟೀಲ, ಲತಾ ಬಡ್ನಿಮಠ, ಮಂಜುಳಾ ಕರಬಸಮ್ಮನವರ, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !