ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ ವಿರೋಧಿ ಶಕ್ತಿಗಳು, ಭಯೋತ್ಪಾದಕರು ಮತ್ತು ಸೈಬರ್ ಅಪರಾಧಿಗಳು ಕಾನೂನುಬದ್ಧ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಇದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಗಂಭೀರ ಆತಂಕದಿಂದಾಗಿ, ಬ್ಲೂಟೂತ್ ಆಧಾರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆದ ‘ಬಿಟ್‌ಚಾಟ್’ ಅನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವಂತೆ ಮೈಕ್ರೋಸಾಫ್ಟ್ ಒಡೆತನದ ಗಿಟ್‌ಹಬ್ ಸಂಸ್ಥೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಏನಿದು ಬಿಟ್‌ಚಾಟ್ ಆಪ್?
ಗೃಹ ಸಚಿವಾಲಯದ ಸೈಬರ್ ಅಪರಾಧ ವಿಭಾಗವಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ, ಬಿಟ್‌ಚಾಟ್ ಒಂದು ವಿಕೇಂದ್ರೀಕೃತ ಪೀರ್-ಟು-ಪೀರ್ ಸಂವಹನ ಅಪ್ಲಿಕೇಶನ್ ಆಗಿದೆ. ಈ ಆಪ್ ಸಂದೇಶಗಳನ್ನು ರವಾನಿಸಲು ಯಾವುದೇ ಮೊಬೈಲ್ ನೆಟ್‌ವರ್ಕ್, ವೈ-ಫೈ ಅಥವಾ ಕೇಂದ್ರೀಕೃತ ಸರ್ವರ್‌ಗಳನ್ನು ಅವಲಂಬಿಸುವುದಿಲ್ಲ. ಬದಲಿಗೆ, ಕೇವಲ ಬ್ಲೂಟೂತ್ ಮೆಶ್ ನೆಟ್‌ವರ್ಕ್ ಬಳಸಿ ಮೊಬೈಲ್‌ನಿಂದ ಮೊಬೈಲ್‌ಗೆ ನೇರವಾಗಿ ಸಂಪರ್ಕ ಸಾಧಿಸುತ್ತದೆ. ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ ಸಂದರ್ಭದಲ್ಲೂ ಈ ಆಪ್ ಮೂಲಕ ಸುಲಭವಾಗಿ ಸಂದೇಶಗಳನ್ನು ಕಳುಹಿಸಬಹುದಾಗಿದೆ.
ನಿಷೇಧಕ್ಕೆ ಪ್ರಮುಖ ಕಾರಣಗಳೇನು?
ಈ ಅಪ್ಲಿಕೇಶನ್‌ನ ವಿನ್ಯಾಸವು ತನಿಖಾ ಸಂಸ್ಥೆಗಳು ಅಪರಾಧಿಗಳ ಸಂದೇಶಗಳನ್ನು ತಡೆಹಿಡಿಯಲು ಮತ್ತು ತನಿಖೆ ಮಾಡುವುದನ್ನು ಸಂಪೂರ್ಣವಾಗಿ ತಡೆಯುತ್ತದೆ. ಸಂದೇಶವನ್ನು ಯಾರು, ಯಾರಿಗೆ ಕಳುಹಿಸಿದ್ದಾರೆ ಎಂಬ ಮೂಲವನ್ನು ಪತ್ತೆ ಹಚ್ಚುವುದು ಭದ್ರತಾ ಸಂಸ್ಥೆಗಳಿಗೆ ಸವಾಲಿನ ಕೆಲಸವಾಗಿದೆ. ಈ ಆಪ್‌ಗೆ ಯಾವುದೇ ನಿರ್ದಿಷ್ಟ ಸೇವಾ ಪೂರೈಕೆದಾರರು ಅಥವಾ ಮುಖ್ಯ ಸರ್ವರ್ ಇರುವುದಿಲ್ಲ. ಹೀಗಾಗಿ ಅಪರಾಧ ಕೃತ್ಯಗಳು ನಡೆದಾಗ ಕಾನೂನು ಜಾರಿ ಸಂಸ್ಥೆಗಳಿಗೆ ಬಳಕೆದಾರರ ವಿವರಗಳನ್ನು ಪಡೆಯಲು ಯಾವುದೇ ಅವಕಾಶ ಇರುವುದಿಲ್ಲ.
ಇದನ್ನೂ ಓದಿ:
ದೇಶದ ಭದ್ರತೆಗೆ ಆತಂಕ
ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಂಟರ್ನೆಟ್ ಕರ್ಫ್ಯೂ ವಿಧಿಸಿದಾಗ, ಇಂತಹ ಆಪ್‌ಗಳನ್ನು ಬಳಸಿ ಸಮಾಜ ವಿರೋಧಿ ಶಕ್ತಿಗಳು ಮತ್ತು ಸಂಘಟಿತ ಅಪರಾಧ ಗ್ಯಾಂಗ್‌ಗಳು ತಮ್ಮ ರಹಸ್ಯ ಕಾರ್ಯಾಚರಣೆಗಳನ್ನು ಮುಂದುವರಿಸುವ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಯನ್ನು ಮುನ್ನೆಲೆಗೆ ತಂದು ಕೇಂದ್ರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.



