July 25, 2026
Saturday, July 25, 2026
spot_img

ನಕಲಿ ಪತ್ರಕರ್ತರ ಸುಲಿಗೆ ಜಾಲಕ್ಕೆ ಬ್ರೇಕ್: ಕಾರು, ಬೈಕ್, ಮೊಬೈಲ್ ಸೇರಿ 2.34 ಲಕ್ಷ ರೂ. ವಶ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪತ್ರಕರ್ತರು ಹಾಗೂ ಯೂಟ್ಯೂಬರ್ ಗಳ ಸೋಗಿನಲ್ಲಿ ವ್ಯಕ್ತಿಯೊಬ್ಬನಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಪ್ರಕರಣವನ್ನು ಭೇದಿಸಿರುವ ಹುಕ್ಕೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ನಗದು, ವಾಹನಗಳು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಜುಲೈ 18ರಂದು ಸಂಜೆ ಸುಮಾರು 5 ಗಂಟೆಗೆ ಕೋಟಭಾಗಿಯ ನಿವಾಸಿ ಮಹಿಬೂಬ್ ಬಾಬುಸಾಬ್ ಜಮಾದಾರ್ ಅವರಿಗೆ ಕಾಕತಿ ಮೂಲದ ವ್ಯಕ್ತಿಯೊಬ್ಬ ಗಾಂಜಾ ಚೀಟಗಳನ್ನು ಖರೀದಿಸುವಂತೆ ಒತ್ತಾಯಿಸಿ ಎರಡು ಚೀಟಗಳಿಗೆ ₹1,000 ಪಡೆದುಕೊಂಡಿದ್ದಾನೆ. ಇದೇ ವೇಳೆ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡು ದೂರುದಾರರನ್ನು ಸಮೀಪದ ಕಬ್ಬಿನ ಗದ್ದೆಗೆ ಕರೆದೊಯ್ದು, ಗಾಂಜಾ ಮಾರಾಟ ಮಾಡುತ್ತಿರುವ ಆರೋಪ ಹೊರಿಸಿ ಬೆದರಿಕೆ ಹಾಕಿದ್ದಾರೆ.

ಬಳಿಕ ದೂರುದಾರರ ಬಳಿಯಿದ್ದ ಗಾಂಜಾ ಪೊಟ್ಟಣಗಳನ್ನು ಬಿಚ್ಚಿಸಿ ಫೋಟೋ ಹಾಗೂ ವೀಡಿಯೊ ಚಿತ್ರೀಕರಿಸಿ, ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹುಕ್ಕೇರಿ ಪೊಲೀಸ್ ಠಾಣೆ ಸಮೀಪಕ್ಕೆ ಕರೆತಂದಿದ್ದಾರೆ. ಅಲ್ಲದೆ, “ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕೋ ಅಥವಾ ಹಣ ನೀಡಿ ವಿಷಯ ಮುಗಿಸಿಕೊಳ್ಳಬೇಕೋ” ಎಂದು ಬೆದರಿಸಿ 2 ರಿಂದ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ 60,000 ನಗದು ಪಡೆದು, ದೂರುದಾರರ ವೀಡಿಯೊವನ್ನು ‘ಜಿ.ಡಿ. ಟಿವಿ’ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದಾಗಿ ಆರೋಪಿಸಲಾಗಿದೆ.

ಇದನ್ನೂ ಓದಿ:

ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 164/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 319(2), 318(4), 140(2) ಹಾಗೂ 3(6) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಗೋಕಾಕ ಡಿವೈಎಸ್ಪಿ ರವಿ ಡಿ. ನಾಯಕ್ ಅವರ ಮಾರ್ಗದರ್ಶನದಲ್ಲಿ, ಹುಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ಗಣಾಚಾರಿ ನೇತೃತ್ವದ ತನಿಖಾ ತಂಡ ಜುಲೈ 24ರಂದು ಬೆಳಗಾವಿಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿಗಳನ್ನು ಕಲ್ಲಪ್ಪ ಬಸವಣ್ಣಿ ಮಾಳಾಜ್ (ಸಂಪೂರ್ಣಾ ಯೂಟ್ಯೂಬರ್), ಆಂಜನೇಯನಗರ, ಹುಕ್ಕೇರಿ. ಮಲ್ಲಿಕಾರ್ಜುನ ಸಿದ್ದಪ್ಪ ಜುಲಫಿ (ರಾಜ್ ಟಿ.ವಿ.), ನಾಗರಮುನ್ನೋಳಿ, ತಾ. ಚಿಕ್ಕೋಡಿ. ಪೃಥ್ವಿರಾಜ್ ನಾರಾಯಣ ಚೌಹಾಣ್ (ಜಿ.ಡಿ. ಯೂಟ್ಯೂಬರ್), ಮಾನಗಾವ್, ತಾ. ಚಂದಗಡ, ಹಾಲಿ ಹೊಸವಂಟಮೂರಿ. ಡೇವಿಡ್ ಜಾಕೋಬ್ ತಂಗೇರಾಳ (ಸಿ.ಡಿ. ಯೂಟ್ಯೂಬರ್), ಗಣೇಶಪುರ, ಬೆಳಗಾವಿ ಎಂದು ಗುರುತಿಸಲಾಗಿದೆ.

ಇವರಿಂದ ಕಾರು ಹೀರೋ ಹೆಚ್.ಎಫ್. ಡಿಲಕ್ಸ್ ಬೈಕ್, ಸುಲಿಗೆ ಮಾಡಿದ 2,34,000 ನಗದು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಮಾನ್ಯ ಜೆಎಂಎಫ್ಸಿ ನ್ಯಾಯಾಲಯ, ಹುಕ್ಕೇರಿಗೆ ಹಾಜರುಪಡಿಸಿ ಪೊಲೀಸ್ ವಶಕ್ಕೆ (ರಿಮಾಂಡ್) ಕೋರಲಾಗಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !