September 17, 2026
Thursday, September 17, 2026
spot_img

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗನ್ ಬಳಸಲು ಗೃಹ ಇಲಾಖೆ ಒಪ್ಪಿಗೆ ನೀಡಿತ್ತೇ?: ಅಮಿತ್ ಶಾಗೆ ರಾಹುಲ್ ಗಾಂಧಿ ತರಾಟೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನೀಟ್ ಪರೀಕ್ಷೆ ಹಗರಣದ ವಿರುದ್ಧ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯದ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕಟು ಶಬ್ದಗಳಲ್ಲಿ ಪತ್ರ ಬರೆದಿರುವ ಅವರು, “ವಿದ್ಯಾರ್ಥಿಗಳ ಮೇಲಿನ ಬರ್ಬರ ದಾಳಿಗೆ ಗೃಹ ಇಲಾಖೆಯೇ ಉತ್ತರದಾಯಿಯಾಗಬೇಕು. ದೇಶದ ಯುವಕರ ವಿರುದ್ಧ ಪೆಲ್ಲೆಟ್ ಗನ್ ಸೇರಿದಂತೆ ಮಾರಕ ಬಲಪ್ರಯೋಗ ಮಾಡಲು ಗೃಹ ಸಚಿವರಾಗಿ ನೀವು ಅನುಮೋದನೆ ನೀಡಿದ್ದೀರಾ?” ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪತ್ರದ ಪ್ರಮುಖ ಅಂಶಗಳು

ತಮ್ಮ ಪತ್ರದ ಮೂಲಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಜುಲೈ 20 ರಂದು ದೆಹಲಿಯಲ್ಲಿ ನ್ಯಾಯಯುತ ಶಿಕ್ಷಣ ವ್ಯವಸ್ಥೆಗಾಗಿ ಹೋರಾಡುತ್ತಿದ್ದ ಯುವಕರ ಧ್ವನಿಯನ್ನು ಆಲಿಸುವ ಬದಲು, ಭದ್ರತಾ ಪಡೆಗಳು ಕಣ್ಣೀರಿನ ಅನಿಲ ಮತ್ತು ಮಾರಕ ಆಯುಧಗಳನ್ನು ಬಳಸಿ ಮನಬಂದಂತೆ ದಾಳಿ ನಡೆಸಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ದಾಳಿಯಲ್ಲಿ ನೂರಾರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಮಹಿಳಾ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಗುರಿಯಾಗಿಸಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಗಾಯಗೊಂಡ ವಿದ್ಯಾರ್ಥಿಯ ಪ್ರದರ್ಶನ

ಶುಕ್ರವಾರ ಮಾಧ್ಯಮಗಳ ಮುಂದೆ ಮಾತನಾಡಿದ ರಾಹುಲ್ ಗಾಂಧಿ, ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಚಾಬ್‌ನನ್ನು ಪರಿಚಯಿಸಿದರು. ಸಾಹಿಲ್‌ನ ಟಿ-ಶರ್ಟ್ ಎತ್ತಿ ಆತನ ದೇಹದ ಮೇಲಿನ ಗಾಯದ ಗುರುತುಗಳನ್ನು ಮಾಧ್ಯಮಗಳಿಗೆ ತೋರಿಸಿದ ಅವರು, “ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಈ ಯುವಕನಿಗೆ ಪೆಲ್ಲೆಟ್ ಗನ್‌ನಿಂದ ಶೂಟ್ ಮಾಡಲಾಗಿದೆ. ಈ ಕ್ರಮದಿಂದಾಗಿ ಆತ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾನೆ” ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಇದೇ ವೇಳೆ, ಸಾಮಾನ್ಯ ಉಡುಪಿನಲ್ಲಿ ಬಂದು ವಿದ್ಯಾರ್ಥಿಗಳಿಗೆ ಲಾಠಿಯಿಂದ ಹೊಡೆದವರು ಯಾರು? ಅವರ ನಿಯೋಜನೆಗೆ ಯಾರು ಅಧಿಕಾರ ನೀಡಿದರು? ಎಂದು ಪ್ರಶ್ನಿಸಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !