October 15, 2026
Thursday, October 15, 2026
spot_img

WEATHER | ಸಿಡಿಲು-ಮಿಂಚಿನ ಜೊತೆ ಗಾಳಿ ಮಳೆ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಕಟ್ಟೆಚ್ಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಲ್ಲಿ ಇವತ್ತು ಮುಂಗಾರು ಮತ್ತೆ ಚುರುಕಾಗಿದ್ದು, ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಸಿಡಿಲು, ಮಿಂಚು ಹಾಗೂ ಜೋರು ಬಿರುಗಾಳಿಯೊಂದಿಗೆ ವರುಣದೇವ ಅಬ್ಬರಿಸುವ ಸೂಚನೆ ಸಿಕ್ಕಿದೆ.

ದಕ್ಷಿಣ ಒಳನಾಡಿನಲ್ಲಿ ಗುಡುಗು-ಮಿಂಚಿನ ಆರ್ಭಟ

ಸಿಲಿಕಾನ್ ಸಿಟಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಜೋರು ಮಳೆಯಾಗಲಿದೆ.

ಇದರ ಜೊತೆಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ, ಹೊರಗಡೆ ಓಡಾಡುವ ವಾಹನ ಸವಾರರು ಮತ್ತು ಸಾರ್ವಜನಿಕರು ಕೊಂಚ ಎಚ್ಚರದಿಂದ ಇರಬೇಕಾಗಿದೆ.

ಉತ್ತರ ಒಳನಾಡು, ಕರಾವಳಿಯಲ್ಲೂ ಮಳೆ ಮುನ್ಸೂಚನೆ

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಇವತ್ತು ಒಂದೆರಡು ಕಡೆ ಹಗುರ ಮಳೆಯಾಗಬಹುದು. ಆದರೆ ನಾಳೆ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜೋರು ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಇತ್ತ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲೂ ಇಂದಿನಿಂದ ಎರಡು ದಿನ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ.

Must Read