ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಂಗಳದಲ್ಲಿ ಈಗ ಕತ್ರಿನಾ ಕೈಫ್ ಅವರ ಹೊಸ ಲುಕ್ ಸುತ್ತ ದೊಡ್ಡ ಮಟ್ಟದ ಚರ್ಚೆ ನಡೀತಿದೆ. ಹೋದ ವರುಷ ನವೆಂಬರ್‌ನಲ್ಲಿ ಪತಿ ವಿಕ್ಕಿ ಕೌಶಲ್ ಜೊತೆ ಮುದ್ದಾದ ಗಂಡು ಮಗು ‘ವಿಹಾನ್’ಗೆ ಜನ್ಮ ನೀಡಿದ ಕತ್ರಿನಾ, ತಾಯ್ತನದ ಖುಷಿಯಲ್ಲಿದ್ದು ಸಿನಿಮಾ ರಂಗದಿಂದ ಕೊಂಚ ಬ್ರೇಕ್ ತಗೊಂಡಿದ್ದರು. ಇತ್ತೀಚೆಗೆ ಮುಕೇಶ್ ಅಂಬಾನಿ ಮನೆಯ ಗಣಪತಿ ಪೂಜೆಗೆ ವಿಕ್ಕಿ ಜೊತೆ ಕತ್ರಿನಾ ಬಂದಾಗ, ಕೆಲವರು ಆಕೆಯ ಹೊಸ ಲುಕ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಲು ಶುರುಮಾಡಿದರು. ಹಳೆಯ ಫೋಟೋಗಳು ಮತ್ತು ಮಗುವಾದ ಮೇಲಿನ ಫೋಟೋಗಳನ್ನು ಪಕ್ಕಪಕ್ಕದಲ್ಲಿ ಇಟ್ಟು “ಅಯ್ಯೋ, ಕತ್ರಿನಾ ಲುಕ್ ಏನಾಗಿ ಹೋಯ್ತು?” ಎಂದು ಕಾಮೆಂಟ್ ಹಾಕೋಕೆ ಶುರುಮಾಡಿದ್ರು.

ಈ ಕೀಳುಮಟ್ಟದ ಟ್ರೋಲಿಂಗ್‌ಗೆ ಈಗ ‘ಮೇರೆ ಬ್ರದರ್ ಕಿ ದುಲ್ಹನ್’ ಸಿನಿಮಾದಲ್ಲಿ ಕತ್ರಿನಾ ಜೊತೆ ನಟಿಸಿದ್ದ ಪಾಕಿಸ್ತಾನದ ಖ್ಯಾತ ನಟ ಮತ್ತು ಗಾಯಕ ಅಲಿ ಜಾಫರ್ ಖಡಕ್ ಆಗಿ ಉತ್ತರ ನೀಡಿದ್ದಾರೆ.
ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಮಾತನಾಡಿರೋ ಅಲಿ, ಈ ತರಹದ ಬಾಡಿ ಶೇಮಿಂಗ್ ವಿರುದ್ಧ ತಾನು ವರ್ಷಗಳಿಂದ ಧ್ವನಿ ಎತ್ತುತ್ತಲೇ ಬಂದಿರುವುದಾಗಿ ಹೇಳಿದ್ದಾರೆ. “ಮಾಹಿರಾ ಖಾನ್ ಸೇರಿದಂತೆ ನನ್ನ ಪಾಕಿಸ್ತಾನಿ ಸಹನಟಿಯರ ಮೇಲೂ ಈ ತರಹದ ಟ್ರೋಲ್ ನಡೆದಾಗ ನಾನು ಸುಮ್ಮನಿರಲಿಲ್ಲ, ಈಗಲೂ ಇರಲ್ಲ” ಎಂದಿದ್ದಾರೆ.

ವಿಶೇಷವಾಗಿ ಪುರುಷರ ಮನಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡ ಅಲಿ, “ನಾವೆಲ್ಲರೂ ನಮ್ಮ ಅಂತರಂಗವನ್ನು ಒಮ್ಮೆ ತಿರುಗಿ ನೋಡಿಕೊಳ್ಳಬೇಕು. ಸಮಾಜದಲ್ಲಿ ನಾವೇ ಮಾಡಿಕೊಂಡಿರೋ ಕೆಲವು ಸಪರೇಟ್ ರೂಲ್ಸ್ ಮತ್ತು ಸೌಂದರ್ಯದ ಕಟ್ಟುಪಾಡುಗಳಿಗೆ ಒಬ್ಬ ಹೆಣ್ಣು ಹೊಂದಿಕೊಳ್ಳಲಿಲ್ಲ ಅಂದರೆ, ತಕ್ಷಣ ಆಕೆಯನ್ನು ಕೀಳಾಗಿ ನೋಡೋದು, ಕಮೆಂಟ್ ಮಾಡೋದು ತಪ್ಪು. ನಾವ್ಯಾರೂ ಪರ್ಫೆಕ್ಟ್ ಅಲ್ಲ, ಎಲ್ಲರ ಜೀವನದಲ್ಲೂ ತಪ್ಪುಗಳಾಗಿವೆ. ಆದರೆ ಅದನ್ನು ತಿದ್ದಿಕೊಳ್ಳುವುದು ಮುಖ್ಯ” ಎಂದು ನೇರವಾಗಿ ಹೇಳಿದ್ದಾರೆ.
ಇವತ್ತಿನ ಸಮಾಜದಲ್ಲಿ ಹೆಣ್ಣುಮಕ್ಕಳು ಮತ್ತು ಗಂಡಸರ ಮೇಲೆ ಹೇರಲಾಗಿರುವ ಬ್ಯೂಟಿ ಸ್ಟ್ಯಾಂಡರ್ಡ್ಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಲಿ, “ಹಿಂದಿನ ಕಾಲದಲ್ಲಿ ಹೆಣ್ಣಿನ ದೇಹದ ಸೌಂದರ್ಯದ ಕಲ್ಪನೆಯೇ ಬೇರೆ ಇತ್ತು. ಆಮೇಲೆ ಬಂತು ನೋಡಿ ‘ಝೀರೋ ಸೈಜ್’ ಅನ್ನೋ ಭೂತ! ಹೆಣ್ಣುಮಕ್ಕಳು ಝೀರೋ ಸೈಜ್ ಇರಬೇಕು, ಗಂಡಸರಿಗೆ ಸಿಕ್ಸ್ ಪ್ಯಾಕ್ ಇರಬೇಕು ಅನ್ನೋದೆಲ್ಲ ನಿಜ ಜೀವನದಲ್ಲಿ ಅಸಾಧ್ಯ ಮತ್ತು ಆರೋಗ್ಯಕ್ಕೆ ತೀರಾ ಹಾನಿಕರ” ಎಂದು ನುಡಿದಿದ್ದಾರೆ.



