ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಸಿನಿಮಾ, ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಚಿತ್ರದ ಪ್ರಚಾರ ಕಾರ್ಯಕ್ರಮಗಳು ವಿದೇಶಗಳಲ್ಲಿ ಭರಪೂರವಾಗಿ ಸಾಗುತ್ತಿದ್ದು, ಇತ್ತೀಚೆಗೆ ಸ್ಯಾನ್ ಡಿಯಾಗೊದಲ್ಲಿ ನಡೆದ ಪ್ರತಿಷ್ಠಿತ ‘ಕಾಮಿಕ್-ಕಾನ್’ ಸಮಾವೇಶದಲ್ಲಿ ಚಿತ್ರತಂಡ ಪಾಲ್ಗೊಂಡಿತ್ತು. ನಟ ರಣ್‌ಬೀರ್ ಕಪೂರ್, ರಾಕಿ ಭಾಯ್ ಯಶ್, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ನಿರ್ದೇಶಕ ನಿತೀಶ್ ತಿವಾರಿ ಪ್ರಮುಖ ಸಂದರ್ಶನಗಳನ್ನು ನೀಡಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.
ಕಾಮಿಕ್-ಕಾನ್‌ನಲ್ಲಿ ವೈರಲ್ ಆದ ಅನ್‌ಬಾಕ್ಸಿಂಗ್ ವಿಡಿಯೋ
ಈ ಕಾರ್ಯಕ್ರಮದ ವೇಳೆ ಚಿತ್ರತಂಡ ನೀಡಿದ ಅಪರೂಪದ ಗಿಫ್ಟ್ ಬಾಕ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪ್ರಚಾರಕ್ಕೆ ನೆರವಾದ ಯೂಟ್ಯೂಬರ್‌ಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಆಯೋಜಕರಿಗೆ ನೀಡಲಾಗಿದ್ದ ಈ ವಿಶೇಷ ಉಡುಗೊರೆಯ ಅನ್‌ಬಾಕ್ಸಿಂಗ್ ವಿಡಿಯೋಗಳು ನೆಟ್‌ನಲ್ಲಿ ಧೂಳೆಬ್ಬಿಸುತ್ತಿವೆ.
ಸಂಸ್ಕೃತಿ ಸಾರುವ ಚಿನ್ನದ ಬಣ್ಣದ ಶಂಖ
ಕಮಲದ ಹೂವಿನ ವಿನ್ಯಾಸವಿರುವ ಸುಂದರ ಪೆಟ್ಟಿಗೆಯಲ್ಲಿ ಈ ಗಿಫ್ಟ್ ನೀಡಲಾಗಿದೆ. ಬಾಕ್ಸ್ ಒಳಗಿನ ವಿಶೇಷ ಪತ್ರದಲ್ಲಿ ಮಾಯಾಮೃಗದ ಚಿತ್ರವಿದ್ದು, ಪ್ರಮುಖ ಆಕರ್ಷಣೆಯಾಗಿ ಚಿನ್ನದ ಬಣ್ಣದ ಶಂಖವನ್ನು ಇರಿಸಲಾಗಿದೆ. ಈ ಶಂಖದ ಮೇಲೆ ಶ್ರೀಮನ್ನಾರಾಯಣನ ದಿವ್ಯ ರೂಪಗಳು, ದಶಾವತಾರದ ಕೆತ್ತನೆಗಳು ಹಾಗೂ ಸನಾತನ ಸಂಸ್ಕೃತಿಯ ಸಂಕೇತಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಭಾರತೀಯ ಪಾರಂಪರಿಕ ಕಲೆಯನ್ನು ವಿಶ್ವದಾದ್ಯಂತ ತಲುಪಿಸಿದ ಈ ವಿಶಿಷ್ಟ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.



