ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಗದ್ದಲ, ಟ್ರಾಫಿಕ್, ಮೊಬೈಲ್, ಕೆಲಸದ ಒತ್ತಡ… ಇವೆಲ್ಲವನ್ನೂ ಕೆಲ ಸಮಯ ಮರೆತು ಪ್ರಕೃತಿಯ ಮಡಿಲಲ್ಲಿ ಕಳೆದು ಬರಬೇಕು ಅನಿಸಿದರೆ, ಚಿಕ್ಕಮಗಳೂರು ಜಿಲ್ಲೆಯ ಕ್ಯಾತನಮಕ್ಕಿ (Kyatanamakki) ಟ್ರೆಕ್ ನಿಮ್ಮ ಲಿಸ್ಟ್‌ನಲ್ಲಿ ಇರಲೇಬೇಕು. ಮಳೆಗಾಲದಲ್ಲಿ ಹಸಿರು ಹೊದಿಕೆ ಹೊದ್ದ ಬೆಟ್ಟಗಳು, ಮೋಡಗಳ ನಡುವೆ ಸಾಗುವ ಕಾಲುದಾರಿ, ಈ ಸ್ಥಳವನ್ನು ಚಾರಣಿಗರ ನೆಚ್ಚಿನ ತಾಣವನ್ನಾಗಿಸಿವೆ.
ಮಳೆಗಾಲದಲ್ಲಿ ಮತ್ತಷ್ಟು ಸುಂದರ
ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕ್ಯಾತನಮಕ್ಕಿಯ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಮಳೆಯ ಹನಿಗಳು, ಹಸಿರಿನಿಂದ ಕಂಗೊಳಿಸುವ ಬೆಟ್ಟಗಳು, ಚಿಕ್ಕ ಚಿಕ್ಕ ನೀರಿನ ಹರಿವುಗಳು ಮತ್ತು ಮಂಜಿನ ವಾತಾವರಣ ಚಾರಣವನ್ನು ಮರೆಯಲಾಗದ ಅನುಭವವನ್ನಾಗಿ ಮಾಡುತ್ತದೆ. ಆದರೆ ಮಳೆಯಿಂದ ದಾರಿ ಜಾರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.
ಸ್ನೇಹಿತರ ಜೊತೆ ಟ್ರೆಕ್ಕಿಂಗ್‌ಗೆ ಬೆಸ್ಟ್ ಆಯ್ಕೆ
ಕ್ಯಾತನಮಕ್ಕಿ ಟ್ರೆಕ್ ಅನ್ನು ಸ್ನೇಹಿತರೊಂದಿಗೆ ಮಾಡುವ ಮಜವೇ ಬೇರೆ. ದಾರಿಯುದ್ದಕ್ಕೂ ಫೋಟೋ, ವಿಡಿಯೋ, ರೀಲ್ಸ್ ಮಾಡುತ್ತ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗುವ ಕ್ಷಣಗಳು ಜೀವನಪೂರ್ತಿ ನೆನಪಿನಲ್ಲಿ ಉಳಿಯುತ್ತವೆ. ಸೂರ್ಯೋದಯ ಅಥವಾ ಮೋಡಗಳಿಂದ ಆವೃತವಾದ ಬೆಟ್ಟಗಳ ದೃಶ್ಯ ನಿಮ್ಮ ಕ್ಯಾಮೆರಾದಲ್ಲಿ ಮಾತ್ರವಲ್ಲ, ಮನಸ್ಸಿನಲ್ಲೂ ಶಾಶ್ವತವಾಗಿ ಉಳಿಯುತ್ತದೆ.
ಟ್ರೆಕ್‌ಗೆ ಹೊರಡುವ ಮುನ್ನ ಇದನ್ನು ಮರೆಯಬೇಡಿ
ಉತ್ತಮ ಗ್ರಿಪ್ ಇರುವ ಟ್ರೆಕ್ಕಿಂಗ್ ಶೂ, ರೇನ್‌ಕೋಟ್, ಕುಡಿಯುವ ನೀರು, ಸ್ನಾಕ್ಸ್, ಫಸ್ಟ್‌ಎಯ್ಡ್ ಕಿಟ್ ಮತ್ತು ಅಗತ್ಯ ಔಷಧಿಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ. ಪ್ಲಾಸ್ಟಿಕ್ ತ್ಯಾಜ್ಯವನ್ನು ಅಲ್ಲೇ ಬಿಟ್ಟು ಬರದೆ, ಪ್ರಕೃತಿಯನ್ನು ಸ್ವಚ್ಛವಾಗಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಚಾರಣಿಗರದ್ದು.
ಒಟ್ಟಿನಲ್ಲಿ… ಒಮ್ಮೆ ಕ್ಯಾತನಮಕ್ಕಿಯ ಬೆಟ್ಟದ ತುದಿಯಲ್ಲಿ ನಿಂತು ಸುತ್ತಲಿನ ಹಸಿರು ಲೋಕವನ್ನು ನೋಡಿದರೆ, ಮತ್ತೆ ಮತ್ತೆ ಇಲ್ಲಿಗೆ ಬರಬೇಕು ಅನ್ನಿಸುವುದು ಖಚಿತ. ಪ್ರಕೃತಿಯ ಮಡಿಲಲ್ಲಿ ಮನಸ್ಸಿಗೆ ನೆಮ್ಮದಿ ನೀಡುವ ಈ ಟ್ರೆಕ್, ಪ್ರತಿಯೊಬ್ಬ ಟ್ರಾವೆಲ್ ಪ್ರಿಯರ ಬಕೆಟ್ ಲಿಸ್ಟ್‌ನಲ್ಲಿ ಇರಲೇಬೇಕಾದ ತಾಣವಾಗಿದೆ.



