ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ನಾಯಕ ಶುಭ್‌ಮನ್ ಗಿಲ್ ನೇತೃತ್ವದ ತಂಡದಲ್ಲಿ ಅನುಭವಿ ಆಟಗಾರರ ಜೊತೆಗೆ ಯುವ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದ್ದು, ಗಾಯದಿಂದ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ ತಂಡಕ್ಕೆ ಮರಳಿದ್ದಾರೆ.
ಕನ್ನಡಿಗ ಕೆ.ಎಲ್. ರಾಹುಲ್ ಉಪನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ಶ್ರೀಲಂಕಾ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿ ಭಾರತ ಕಣಕ್ಕಿಳಿಯಲಿದೆ.
ಜಡೇಜಾ ಮತ್ತೆ ತಂಡಕ್ಕೆ
ಮೊಣಕೈ ಗಾಯದಿಂದ ಕೆಲಕಾಲ ವಿಶ್ರಾಂತಿ ಪಡೆದಿದ್ದ ರವೀಂದ್ರ ಜಡೇಜಾ ಸಂಪೂರ್ಣ ಫಿಟ್ ಆಗಿ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಅವರ ವಾಪಸಾತಿಯಿಂದ ಭಾರತದ ಸ್ಪಿನ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ.
ಇದನ್ನೂ ಓದಿ:
ಸರಂಶ್ ಜೈನ್‌ಗೆ ಮೊದಲ ಅವಕಾಶ
ಮಧ್ಯಪ್ರದೇಶದ ಆಫ್ ಸ್ಪಿನ್ನರ್ ಸರಂಶ್ ಜೈನ್ ಮೊದಲ ಬಾರಿಗೆ ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಅವರಿಗೆ ಅವಕಾಶ ನೀಡಲಾಗಿದೆ.
ಬುಮ್ರಾ, ಸಾಯಿ ಸುದರ್ಶನ್ ಫಿಟ್‌ನೆಸ್ ನಿರೀಕ್ಷೆ
ಜಸ್‌ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಅಂತಿಮವಾಗಿ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಫಿಟ್‌ನೆಸ್ ಅನುಮೋದನೆ ಪಡೆದ ಬಳಿಕವೇ ಅವರು ಕಣಕ್ಕಿಳಿಯಲಿದ್ದಾರೆ.
ಆಗಸ್ಟ್‌ನಲ್ಲಿ ಆರಂಭವಾಗಲಿದೆ ಸರಣಿ
ಆಗಸ್ಟ್ 4ರಂದು ಕೊಲಂಬೋ ತಲುಪಲಿರುವ ಭಾರತ ತಂಡ ಮೊದಲು ಲಂಕಾ ಬೋರ್ಡ್ XI ವಿರುದ್ಧ ನಾಲ್ಕು ದಿನಗಳ ಅಭ್ಯಾಸ ಪಂದ್ಯ ಆಡಲಿದೆ. ಬಳಿಕ ಆಗಸ್ಟ್ 15ರಿಂದ ಗಾಲೆಯಲ್ಲಿ ಮೊದಲ ಟೆಸ್ಟ್ ಹಾಗೂ ಆಗಸ್ಟ್ 23ರಿಂದ ಕೊಲಂಬೋದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.



