ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಮಹತ್ವದ ಆಡಳಿತಾತ್ಮಕ ಬೆಳವಣಿಗೆ ನಡೆದಿದೆ. ದೇಣಿಗೆ ವಿವಾದ ಹಾಗೂ ಬ್ಯಾಂಕ್ ವಹಿವಾಟಿನ ಸ್ಥಗಿತದ ನಡುವೆಯೇ, ಟ್ರಸ್ಟ್‌ನ ಪ್ರಥಮ ‘ಕಾರ್ಯದರ್ಶಿ’ ಹುದ್ದೆಗೆ ಜಗದೀಶ್ ಅಫ್ಲೆ ಅವರನ್ನು ಆಯ್ಕೆ ಮಾಡಲಾಗಿದೆ. ಚಂಪತ್ ರಾಯ್ ಮತ್ತು ಡಾ. ಅನಿಲ್ ಮಿಶ್ರಾ ಅವರ ರಾಜೀನಾಮೆಯಿಂದಾಗಿ ಸಿಬ್ಬಂದಿ ವೇತನ ಹಾಗೂ ಪಾವತಿಗಳಲ್ಲಿ ವಿಳಂಬವಾಗಿತ್ತು. ಇದೀಗ ಎಸ್‌ಬಿಐ ಖಾತೆಗಳ ಅಧಿಕೃತ ಸಹಿದಾರರಾಗಿ ಅಫ್ಲೆ ಅವರನ್ನು ನೇಮಿಸಲಾಗಿದ್ದು, ಸೆಪ್ಟೆಂಬರ್ 2ರ ಸಭೆಯಲ್ಲಿ ಈ ನಿರ್ಧಾರಕ್ಕೆ ಅಧಿಕೃತ ಮುದ್ರೆ ಬೀಳಲಿದೆ.
ಯಾರೀ ಜಗದೀಶ್ ಅಫ್ಲೆ?
ಮಹಾರಾಷ್ಟ್ರದ ಪುಣೆ ಮೂಲದವರಾದ ಜಗದೀಶ್ ಅಫ್ಲೆ, ಐಐಟಿ ಬಾಂಬೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಪದವಿ ಪಡೆದಿದ್ದಾರೆ. ಅಮೆರಿಕ ಹಾಗೂ ಯುರೋಪ್ ಖಂಡಗಳ ಹಲವು ದೈತ್ಯ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಸುದೀರ್ಘ ಅನುಭವ ಇವರಿಗಿದೆ.
ವೇತನವಿಲ್ಲದೆ ನಿರಂತರ ಧಾರ್ಮಿಕ ಸೇವೆ
ಬಾಲ್ಯದಿಂದಲೂ ಆರ್‌ಎಸ್‌ಎಸ್ ಸ್ವಯಂಸೇವಕರಾಗಿರುವ ಅಫ್ಲೆ, ವಿದೇಶದಿಂದ ನಿವೃತ್ತರಾಗಿ ಮರಳಿದ ನಂತರ ರಾಮಮಂದಿರ ನಿರ್ಮಾಣ ಯೋಜನೆಯ ಆರಂಭದಿಂದಲೂ ಯಾವುದೇ ಸಂಭಾವನೆ ಪಡೆಯದೆ ‘ಪ್ರಾಜೆಕ್ಟ್ ಮ್ಯಾನೇಜರ್’ ಆಗಿ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಪತ್ನಿಯೊಂದಿಗೆ ಅಯೋಧ್ಯೆಯ ತೀರ್ಥ ಕ್ಷೇತ್ರ ಭವನದಲ್ಲೇ ನೆಲೆಸಿರುವ ಇವರ ನೂತನ ನೇಮಕಾತಿಯಿಂದ ಟ್ರಸ್ಟ್‌ನ ಹಣಕಾಸು ಬಿಕ್ಕಟ್ಟು ಬಗೆಹರಿದಿದೆ.



