July 29, 2026
Wednesday, July 29, 2026
spot_img

ಅಸ್ಸಾಂ ಪ್ರವಾಹ: 10 ಸಾವಿರ ಕುಟುಂಬಗಳಿಗೆ ರಿಲಯನ್ಸ್ ಫೌಂಡೇಷನ್‌ನಿಂದ ನೆರವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಸ್ಸಾಂನಲ್ಲಿ ಸುರಿದ ಭಾರಿ ಮಳೆ ಮತ್ತು ದಿಢೀರ್ ಪ್ರವಾಹದಿಂದ ಸಂಕಷ್ಟಕ್ಕೆ ಗುರಿಯಾದ ಜನರ ನೆರವಿಗೆ ರಿಲಯನ್ಸ್ ಫೌಂಡೇಷನ್ ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದೆ.

ಶಿವಸಾಗರ ಮತ್ತು ಚರೈದೇವ್ ಜಿಲ್ಲೆಗಳ ಕನಿಷ್ಠ 10 ಸಾವಿರ ಕುಟುಂಬಗಳಿಗೆ ಆಹಾರ, ಸುರಕ್ಷಿತ ಕುಡಿಯುವ ನೀರು, ಪಡಿತರ, ಆರೋಗ್ಯ ಸೇವೆ ಮತ್ತು ತಾತ್ಕಾಲಿಕ ಆಶ್ರಯಕ್ಕೆ ಅಗತ್ಯ ಇರುವ ನೆರವನ್ನು ತಲುಪಿಸಲಾಗುತ್ತದೆ.

ರಿಲಯನ್ಸ್ ಫೌಂಡೇಷನ್‌ನ ವಿಪತ್ತು ನಿರ್ವಹಣಾ ತಂಡವು ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ ನಂತರ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ‘ವನತಾರಾ’, ರಿಲಯನ್ಸ್ ರೀಟೇಲ್ ಮತ್ತು ಜಿಯೋ ಸಂಸ್ಥೆಗಳು ಸಹ ಈ ಅಭಿಯಾನದಲ್ಲಿ ಕೈ ಜೋಡಿಸಿವೆ. ಆಹಾರ ಮತ್ತು ಪಡಿತರ ವ್ಯವಸ್ಥೆ ಇಲ್ಲದ ಕುಟುಂಬಗಳಿಗಾಗಿ ಸಮುದಾಯ ಅಡುಗೆಮನೆಗಳನ್ನು (Community Kitchens) ನಡೆಸಲಾಗುತ್ತಿದೆ. ಇದರೊಂದಿಗೆ ಒಣ ಪಡಿತರ ಪೊಟ್ಟಣಗಳನ್ನೂ (Dry Ration Packets) ವಿತರಿಸಲಾಗುವುದು. ಮನೆ ಕಳೆದುಕೊಂಡ ಕುಟುಂಬಗಳಿಗೆ ಟಾರ್ಪಾಲಿನ್, ಗ್ರೌಂಡ್‌ಶೀಟ್, ಸೊಳ್ಳೆ ಪರದೆ, ಹಗ್ಗ ಮತ್ತು ಹಾಸಿಗೆಗಳನ್ನು ಒಳಗೊಂಡ ತುರ್ತು ಆಶ್ರಯ ಕಿಟ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಸಾಕುಪ್ರಾಣಿಗಳಿಗೆ ಆಗಿರುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ‘ವನತಾರಾ’ ಸಂಸ್ಥೆಯ 39 ಸದಸ್ಯರ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಈ ತಂಡವು ಪ್ರಾಣಿಗಳ ಚಿಕಿತ್ಸೆ ಮತ್ತು ಆರೈಕೆಯೊಂದಿಗೆ ಸ್ಥಳೀಯರ ಇತರ ಜಾನುವಾರುಗಳಿಗೂ ನೆರವಾಗಲಿದೆ. ಪ್ರವಾಹ ಪೀಡಿತ ಸುಮಾರು 4 ಸಾವಿರ ಜಾನುವಾರುಗಳಿಗೆ ಮೇವು ಒದಗಿಸಲು ರಿಲಯನ್ಸ್ ಫೌಂಡೇಷನ್ ಯೋಜನೆ ರೂಪಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !