ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಾಗೂ ವೇಗದ ಚಾಲನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇರಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ 24 ಗಂಟೆಗಳ ಕಾಲ ನಿರಂತರ ವಾಹನ ತಪಾಸಣೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಸಿಪಿ ಜಾನ್ ತಿಳಿಸಿದ್ದಾರೆ.
ಕೇರಳದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು 100 ಕಿಲೋ ಮೀಟರ್ ವ್ಯಾಪ್ತಿಯ ಆರು ಜಾರಿ (ಎನ್ಫೋರ್ಸ್ಮೆಂಟ್) ವಲಯಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ವಲಯದಲ್ಲಿ ವಿಶೇಷ ಜಾರಿ ತಂಡಗಳನ್ನು ನಿಯೋಜಿಸಿ ಹಗಲು-ರಾತ್ರಿ ವಾಹನಗಳ ತಪಾಸಣೆ ನಡೆಸಲಾಗುತ್ತದೆ. ರಸ್ತೆ ಅಪಘಾತಗಳಿಗೆ ಅತಿವೇಗವೇ ಪ್ರಮುಖ ಕಾರಣ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯುವುದು, ಅಪಘಾತಗಳು ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡುವುದು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತೆ ಹೆಚ್ಚಿಸುವುದು ಕೂಡಾ ಇದರ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ:
ಯೋಜನೆಯಂತೆ ತಿರುವನಂತಪುರಂ, ತ್ರಿಶೂರ್, ಎರ್ನಾಕುಲಂ ಹಾಗೂ ಕೋಜಿಕೋಡ್ ಉಪ ಸಾರಿಗೆ ಆಯುಕ್ತರ ವ್ಯಾಪ್ತಿಯಲ್ಲಿ ಒಟ್ಟು ಆರು ಕಾರ್ಯಾಚರಣಾ ವಲಯಗಳು ಕಾರ್ಯನಿರ್ವಹಿಸಲಿವೆ. ಪ್ರತಿ ವಲಯದಲ್ಲಿ ಮೋಟಾರು ವಾಹನ ನಿರೀಕ್ಷಕರು, ಸಹಾಯಕ ಮೋಟಾರು ವಾಹನ ನಿರೀಕ್ಷಕರು, ಚಾಲಕರು ಹಾಗೂ ಅಗತ್ಯ ತಪಾಸಣಾ ಸಾಧನಗಳನ್ನು ಹೊಂದಿರುವ ವಿಶೇಷ ತಂಡಗಳು ಕರ್ತವ್ಯ ನಿರ್ವಹಿಸಲಿವೆ. ಅಧಿಕಾರಿಗಳನ್ನು ಹಗಲು, ಸಂಜೆ ಹಾಗೂ ರಾತ್ರಿ ಪಾಳಿಗಳಲ್ಲಿ ನಿಯೋಜಿಸಲಾಗುತ್ತಿದ್ದು, ಕಚೇರಿ ಕಾರ್ಯಗಳಿಗೆ ಯಾವುದೇ ಅಡ್ಡಿಯಾಗದಂತೆ ಕರ್ತವ್ಯ ಹಂಚಿಕೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ತಪಾಸಣೆಯ ವೇಳೆ ಅತಿವೇಗ, ಅಪಾಯಕಾರಿ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ, ಚಾಲನೆ ವೇಳೆ ಮೊಬೈಲ್ ಬಳಕೆ, ಸೀಟ್ಬೆಲ್ಟ್ ಮತ್ತು ಹೆಲ್ಮೆಟ್ ಧರಿಸದಿರುವುದು, ಓವರ್ಲೋಡ್ ಸರಕು ಸಾಗಣೆ, ಅಕ್ರಮ ವಾಹನ ಮಾರ್ಪಾಡು, ಫಿಟ್ನೆಸ್, ಪರವಾನಗಿ, ವಿಮೆ ಹಾಗೂ ತೆರಿಗೆ ಉಲ್ಲಂಘನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.
ಇದಲ್ಲದೆ, ದೊಡ್ಡ ಅಪಘಾತಗಳು ಸಂಭವಿಸಿದರೆ ತಕ್ಷಣ ಸ್ಥಳಕ್ಕೆ ತೆರಳಿ ಸಂಚಾರಕ್ಕೆ ಅಡ್ಡಿಯಾಗುವ ವಾಹನಗಳನ್ನು ತೆರವುಗೊಳಿಸುವುದು, ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ಜಾರಿ ತಂಡಗಳಿಗೆ ಸರ್ಕಾರ ಸೂಚನೆ ನೀಡಿದೆ.



