ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಪ್ರಯಾಣದ ವೇಳೆ ಹಾನಿಗೊಳಗಾದ ದುಬಾರಿ ಮದ್ಯದ ಬಾಟಲಿ ಪ್ರಕರಣದಲ್ಲಿ ಪ್ರಯಾಣಿಕನ ಪರವಾಗಿ ಗ್ರಾಹಕ ಆಯೋಗ ಮಹತ್ವದ ತೀರ್ಪು ನೀಡಿದೆ.
ಕೇವಲ 500 ರೂ ವೋಚರ್ ನೀಡಿ ಪ್ರಕರಣ ಮುಕ್ತಾಯಗೊಳಿಸಲು ಯತ್ನಿಸಿದ್ದ ಇಂಡಿಗೋ ಏರ್‌ಲೈನ್ಸ್‌ಗೆ, ಹಾನಿ ಪರಿಹಾರ, ಮಾನಸಿಕ ವೇದನೆ ಮತ್ತು ನ್ಯಾಯಾಂಗ ವೆಚ್ಚ ಸೇರಿ ಒಟ್ಟು 55,000 ರೂ ಪಾವತಿಸುವಂತೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ ಆದೇಶಿಸಿದೆ.
ದುಬಾರಿ ಬಾಟಲಿ ಒಡೆದು ಹಾನಿ
2025ರ ಸೆಪ್ಟೆಂಬರ್ 3ರಂದು ದೆಹಲಿಯಿಂದ ಚೆನ್ನೈಗೆ ಪ್ರಯಾಣಿಸಿದ್ದ ವಿನಿತ್ ಎಂಬ ಪ್ರಯಾಣಿಕ, ₹35,000 ಮೌಲ್ಯದ ಪ್ರೀಮಿಯಂ ಮದ್ಯದ ಬಾಟಲಿ ಬ್ಯಾಗ್‌ನಲ್ಲಿ ಇದ್ದು ಅದು ಸೂಕ್ಷ್ಮ ವಸ್ತು ಎಂದು ಚೆಕ್-ಇನ್ ವೇಳೆ ಸಿಬ್ಬಂದಿಗೆ ಮುಂಚಿತವಾಗಿಯೇ ತಿಳಿಸಿದ್ದರು. ಆದರೆ ಚೆನ್ನೈ ತಲುಪಿದ ಬಳಿಕ ಬ್ಯಾಗ್ ತೆರೆದಾಗ ಬಾಟಲಿ ಒಡೆದು ಇತರ ಸಾಮಗ್ರಿಗಳಿಗೂ ಹಾನಿಯಾಗಿರುವುದು ಕಂಡುಬಂದಿತ್ತು.
ಇದನ್ನೂ ಓದಿ:
500 ವೋಚರ್ ನೀಡಿದ್ದ ಇಂಡಿಗೋ
ಪ್ರಯಾಣಿಕ ದೂರು ನೀಡಿದ ಬಳಿಕ ಇಂಡಿಗೋ, ಸೂಕ್ಷ್ಮ ವಸ್ತುಗಳನ್ನು ಪ್ರಯಾಣಿಕರು ತಮ್ಮ ಸ್ವಂತ ಜವಾಬ್ದಾರಿಯಲ್ಲಿ ಸಾಗಿಸಬೇಕು ಎಂಬ ನೀತಿಯನ್ನು ಉಲ್ಲೇಖಿಸಿ ಕೇವಲ 500 ಮೌಲ್ಯದ ವೋಚರ್ ನೀಡಲು ಮುಂದಾಗಿತ್ತು. ಬಳಿಕ ವಿನಿತ್ ಕಾನೂನು ನೋಟಿಸ್ ನೀಡಿ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಆಯೋಗದ ಮಹತ್ವದ ತೀರ್ಪು
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ಆಯೋಗ, ಹಾನಿಗೊಳಗಾದ ಬಾಟಲಿಯ ಮೌಲ್ಯವಾದ 35,000, ರೂ ಮಾನಸಿಕ ಹಿಂಸೆಗಾಗಿ 15,000 ರೂ ಹಾಗೂ ನ್ಯಾಯಾಂಗ ವೆಚ್ಚವಾಗಿ 5,000 ರೂ ಪಾವತಿಸಲು ಇಂಡಿಗೋಗೆ ಆದೇಶಿಸಿದೆ. ಜೊತೆಗೆ 35,000 ರೂ ಮೊತ್ತಕ್ಕೆ ವಾರ್ಷಿಕ 9% ಬಡ್ಡಿಯನ್ನೂ ನೀಡುವಂತೆ ನಿರ್ದೇಶನ ನೀಡಿದೆ.



