ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗು ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಬಿರುಸು ಪಡೆದುಕೊಂಡಿರುವ ಗಾಳಿ ಮಳೆಯ ಆರ್ಭಟ ಇಂದು ಮತ್ತಷ್ಟು ತೀವ್ರಗೊಂಡಿದೆ. ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಳ್ಳ-ಕೊಳ್ಳಗಳು ಹಾಗೂ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಹಾರಂಗಿ ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ:
ಮಳೆಯ ತೀವ್ರತೆಗೆ ಹಾರಂಗಿ ಜಲಾನಯನ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಜಲಾಶಯದ ಒಟ್ಟು ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 2,857.88 ಅಡಿಗಳಿಗೆ ತಲುಪಿದೆ. ಸದ್ಯ ಜಲಾಶಯಕ್ಕೆ 4,008 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ 3,700 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ತಕ್ಷಣವೇ ಹರಿಸಲಾಗುತ್ತಿದೆ. ನದಿ ಪಾತ್ರದ ತಗ್ಗು ಪ್ರದೇಶಗಳ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ತ್ರಿವೇಣಿ ಸಂಗಮದಲ್ಲಿ ಹೆಚ್ಚಿದ ಆತಂಕ:
ಪವಿತ್ರ ಕ್ಷೇತ್ರಗಳಾದ ತಲಕಾವೇರಿ ಮತ್ತು ಭಗಮಂಡಲ ವ್ಯಾಪ್ತಿಯಲ್ಲಿ ವರುಣನ ರೌದ್ರನರ್ತನ ಮುಂದುವರಿದಿದೆ. ಕಾವೇರಿ ನದಿಯ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿರುವುದರಿಂದ ಭಗಮಂಡಲದ ಪ್ರಸಿದ್ಧ ‘ತ್ರಿವೇಣಿ ಸಂಗಮ’ ಜಲಾವೃತಗೊಂಡಿದೆ. ಸಂಗಮದಲ್ಲಿ ನೀರಿನ ಆಳ ಹೆಚ್ಚಾಗುತ್ತಿರುವುದರಿಂದ ಭಕ್ತರು ಮತ್ತು ಸಾರ್ವಜನಿಕರು ನದಿಗೆ ಇಳಿಯದಂತೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ:
ಅನ್ನದಾತನ ಮೊಗದಲ್ಲಿ ಮಂದಹಾಸ
ಒಂದೆಡೆ ಮಳೆಯ ಆರ್ಭಟದಿಂದಾಗಿ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದ್ದರೂ, ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಮುಂಗಾರು ಚುರುಕಾಗಿರುವುದರಿಂದ ಕೊಡಗಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.



