ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಆರ್ಥಿಕ ವಲಯದಲ್ಲಿ ಜುಲೈ ತಿಂಗಳು ಭಾರಿ ಚೇತರಿಕೆ ತಂದಿದೆ. ಭಾರತದ ಒಟ್ಟು GST ಆದಾಯವು ಶೇಕಡಾ 15.4 ರಷ್ಟು ಹೆಚ್ಚಾಗಿದ್ದು, ಬೃಹತ್ ₹2.11 ಲಕ್ಷ ಕೋಟಿ ಮೊತ್ತವನ್ನು ತಲುಪಿದೆ. ಮರುಪಾವತಿಗಳನ್ನು ಹೊರತುಪಡಿಸಿದಾಗ ಉಳಿಯುವ ನಿವ್ವಳ ತೆರಿಗೆ ಆದಾಯದಲ್ಲೂ ಶೇ. 15.8 ರಷ್ಟು ಸುಧಾರಣೆಯಾಗಿದ್ದು, ₹1.81 ಲಕ್ಷ ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ಬಾರಿ ವಾರ್ಷಿಕ ಆಧಾರದಲ್ಲಿ ಗಣನೀಯ ಬೆಳವಣಿಗೆ ಕಂಡುಬಂದಿದೆ.
ಆಮದು ವಲಯದಿಂದ ಭಾರಿ ಆದಾಯ
ದೇಶೀಯ ಮಾರುಕಟ್ಟೆಯ ವಹಿವಾಟುಗಳಿಂದ GST ಸಂಗ್ರಹವು ಶೇ. 10.1 ರಷ್ಟು ಏರಿಕೆಯಾಗಿ ₹1.44 ಲಕ್ಷ ಕೋಟಿಗೆ ತಲುಪಿದೆ. ಇದೇ ವೇಳೆ ವಿದೇಶಗಳಿಂದ ಸರಕು ಆಮದು ಪ್ರಮಾಣ ಹೆಚ್ಚಾಗಿದ್ದು, ಆಮದು ಮೇಲಿನ ಜಿಎಸ್‌ಟಿ ಶೇ. 28.8 ರಷ್ಟು ಭಾರಿ ಜಿಗಿತ ಕಂಡು ₹66,511 ಕೋಟಿ ಸಂಗ್ರಹವಾಗಿದೆ.
ರಾಜ್ಯಗಳ ಸಾಧನೆ ಮತ್ತು ಹಿನ್ನಡೆ
ರಾಜ್ಯಗಳ ಮಟ್ಟದಲ್ಲಿ ಮಹಾರಾಷ್ಟ್ರ ₹32,210 ಕೋಟಿ (13% ಏರಿಕೆ) ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ₹13,854 ಕೋಟಿ (12% ಏರಿಕೆ) ತೆರಿಗೆಯೊಂದಿಗೆ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಹರಿಯಾಣ ರಾಜ್ಯವು ಶೇ. 25 ರಷ್ಟು (₹11,892 ಕೋಟಿ) ಅತ್ಯಂತ ವೇಗದ ಬೆಳವಣಿಗೆ ಸಾಧಿಸಿದೆ. ಗುಜರಾತ್ (₹12,923 ಕೋಟಿ, 19%) ಮತ್ತು ಉತ್ತರ ಪ್ರದೇಶ (₹9,651 ಕೋಟಿ, 15%) ಸಹ ಉತ್ತಮ ಸಾಧನೆ ಮಾಡಿವೆ.
ಆದರೆ, ಹಿಮಾಚಲ ಪ್ರದೇಶ (-22%), ಉತ್ತರಾಖಂಡ್ (-18%), ಆಂಧ್ರಪ್ರದೇಶ (-5%) ಹಾಗೂ ತಮಿಳುನಾಡು (-1%) ರಾಜ್ಯಗಳ ಜಿಎಸ್‌ಟಿ ಆದಾಯದಲ್ಲಿ ಈ ಬಾರಿ ಇಳಿಕೆ ಕಂಡುಬಂದಿದೆ.



