August 6, 2026
Thursday, August 6, 2026
spot_img

ಡಿಜಿಟಲ್ ಪಾವತಿ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಲೋಕಸಭೆಯಲ್ಲಿ ಅಂಗೀಕಾರವಾಯ್ತು ಯುಪಿಐ ಶುಲ್ಕ ಮಸೂದೆ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಸೇರಿದಂತೆ ಇತರ ಡಿಜಿಟಲ್ ಪಾವತಿ ವಿಧಾನಗಳ ಮೇಲೆ ಶುಲ್ಕ ವಿಧಿಸಲು ಹಾದಿ ಸುಗಮಗೊಳಿಸುವ ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007’ ರ ತಿದ್ದುಪಡಿ ಮಸೂದೆಯನ್ನು ಲೋಕಸಭೆಯು ಗುರುವಾರ ಅಂಗೀಕರಿಸಿದೆ.

ಸದನದಲ್ಲಿ ನಡೆದ ತೀವ್ರ ಗದ್ದಲದ ನಡುವೆಯೇ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದ ಮೂಲಕ ಈ ಮಹತ್ವದ ಬಿಲ್‌ಗೆ ಒಪ್ಪಿಗೆ ಸೂಚಿಸಲಾಯಿತು. ಈ ಹೊಸ ಕಾಯ್ದೆಯು ಡಿಜಿಟಲ್ ಪಾವತಿ ಸೇವೆಗಳನ್ನು ಒದಗಿಸುವ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಸುಸ್ಥಿರ ಆದಾಯದ ಮಾದರಿಯನ್ನು ರೂಪಿಸುವ ಗುರಿಯನ್ನು ಹೊಂದಿದೆ.

ಮರ್ಚೆಂಟ್ ಡಿಸ್ಕೌಂಟ್ ರೇಟ್ ನಿಷೇಧ ತೆರವು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ‘ತೆರಿಗೆ ಮತ್ತು ಇತರ ಕಾನೂನುಗಳ ಮಸೂದೆ, 2026’ ರ ಭಾಗವಾಗಿ ಈ ಬದಲಾವಣೆ ತರಲಾಗಿದೆ. ಈ ಹಿಂದೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269SU ಅಡಿಯಲ್ಲಿ ಬ್ಯಾಂಕುಗಳು ಹಾಗೂ ಪಾವತಿ ಸಂಸ್ಥೆಗಳು ರುಪೇ ಡೆಬಿಟ್ ಕಾರ್ಡ್ ಅಥವಾ ಯುಪಿಐ ಕ್ಯೂಆರ್ ಕೋಡ್ ವಹಿವಾಟುಗಳ ಮೇಲೆ ಯಾವುದೇ ರೀತಿಯ ಪ್ರತ್ಯಕ್ಷ ಅಥವಾ ಪರೋಕ್ಷ ಶುಲ್ಕ (MDR) ವಿಧಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು. ಆದರೆ ಪ್ರಸ್ತುತ ತಿದ್ದುಪಡಿಯು ಈ ನಿಷೇಧವನ್ನು ತೆಗೆದುಹಾಕಿದ್ದು, ಕೇಂದ್ರ ಸರ್ಕಾರವು ಅಧಿಕೃತ ಅಧಿಸೂಚನೆ ಹೊರಡಿಸುವ ಮೂಲಕ ನಿರ್ದಿಷ್ಟ ಡಿಜಿಟಲ್ ಪಾವತಿಗಳ ಮೇಲೆ ಕನಿಷ್ಠ ಸೇವಾ ಶುಲ್ಕವನ್ನು ವಿಧಿಸಲು ಬ್ಯಾಂಕುಗಳಿಗೆ ಮುಕ್ತ ಅವಕಾಶ ನೀಡಲಿದೆ.

“ವೆಚ್ಚವನ್ನು ಯಾರಾದರೂ ಭರಿಸಲೇಬೇಕು”: ಆರ್‌ಬಿಐ ಗವರ್ನರ್ ಸ್ಪಷ್ಟನೆ

ಈ ಮಹತ್ವದ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಸಂಜಯ್ ಮಲ್ಹೋತ್ರಾ, ಡಿಜಿಟಲ್ ಪಾವತಿಗಳ ಮೇಲೆ ಶುಲ್ಕದ ಪ್ರಮಾಣ ಎಷ್ಟು ಇರಬೇಕು ಎಂಬ ಚರ್ಚೆ ಸದ್ಯಕ್ಕೆ ಅಕಾಲಿಕ ಎಂದಿದ್ದಾರೆ. ಆದಾಗ್ಯೂ, ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ನಿರ್ವಹಿಸಲು ತಗಲುವ ವೆಚ್ಚವನ್ನು ಯಾರಾದರೂ ಒಬ್ಬರು ಭರಿಸುವುದು ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. “ನಮ್ಮ ಮುಂದಿರುವುದು ಕೇವಲ ಎರಡು ಆಯ್ಕೆಗಳು: ಒಂದೋ ಸಾರ್ವಜನಿಕರು ತಾವು ಪಾವತಿಸುವ ತೆರಿಗೆಯ ಮೂಲಕ ಈ ವೆಚ್ಚವನ್ನು ಭರಿಸಬೇಕು, ಇಲ್ಲವೇ ‘ಬಳಕೆದಾರರೇ ಪಾವತಿಸಲಿ’ ಎಂಬ ನಿಯಮದಡಿ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಜಾರಿಗೆ ತರಬೇಕು. ಸದ್ಯಕ್ಕೆ ಸರ್ಕಾರದ ಮುಂದಿನ ಕ್ರಮಗಳನ್ನು ಕಾದು ನೋಡಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:

ಸಾಮಾನ್ಯ ಗ್ರಾಹಕರ ಮೇಲಾಗುವ ಪರಿಣಾಮಗಳೇನು?

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಈ ತಿದ್ದುಪಡಿಯಿಂದ ಸಾಮಾನ್ಯ ಗ್ರಾಹಕರು ತಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಮಾಡುವ ವೈಯಕ್ತಿಕ ಹಣ ವರ್ಗಾವಣೆಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬದಲಾಗಿ, ಉದ್ಯಮಿಗಳು ಅಥವಾ ದೊಡ್ಡ ವ್ಯಾಪಾರಿ ಸಂಸ್ಥೆಗಳೊಂದಿಗೆ ನಡೆಯುವ ವಹಿವಾಟುಗಳ ಮೇಲೆ ಮಾತ್ರ ಒಂದು ನಿರ್ದಿಷ್ಟ ಮೌಲ್ಯದ ನಂತರ ಕನಿಷ್ಠ ಪ್ರಮಾಣದ ಶುಲ್ಕ ಅನ್ವಯವಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !