August 6, 2026
Thursday, August 6, 2026
spot_img

ಬೆಳಗಾವಿ ಗುಂಡಿಗಳ ನಗರಿ: ಜಿಲ್ಲಾಧಿಕಾರಿ ಕಚೇರಿ ಸುತ್ತಲೂ ಕೆಸರುಗದ್ದೆ, ಸಾರ್ವಜನಿಕರ ಆಕ್ರೋಶ

ಹೊಸದಿಗಂತ ವರದಿ ಬೆಳಗಾವಿ:

ರಾಜ್ಯದ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ, ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿ ಇಂದು ಮೂಲಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸುವರ್ಣ ವಿಧಾನಸೌಧ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿ ಇದೀಗ “ಗುಂಡಿಗಳ ನಗರಿ”ಯಾಗಿ ಮಾರ್ಪಟ್ಟಿದೆ ಎಂಬ ಟೀಕೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಮಳೆ ಆರಂಭವಾದರೆ ಸಾಕು, ನಗರದ ಹಲವು ಪ್ರಮುಖ ರಸ್ತೆಗಳು ಕೆಸರುಗದ್ದೆಗಳಾಗಿ ಬದಲಾಗುತ್ತಿವೆ. ಅದರಲ್ಲೂ ಜಿಲ್ಲಾಧಿಕಾರಿ ಕಚೇರಿಯ ಪಕ್ಕದಲ್ಲಿರುವ ತಾಲೂಕು ಪಂಚಾಯತ್ ರಸ್ತೆಯ ದುಸ್ಥಿತಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿದಿನ ನೂರಾರು ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳಿಗೆ ತೆರಳುವ ಈ ರಸ್ತೆಯಲ್ಲಿ ಆಳವಾದ ಗುಂಡಿಗಳು, ಕೆಸರು ಹಾಗೂ ನೀರು ನಿಂತಿರುವುದರಿಂದ ಸಂಚಾರ ದುಸ್ತರವಾಗಿದೆ.

“ಜಿಲ್ಲಾಧಿಕಾರಿ ಕಚೇರಿ ಮದುವಣಗಿತ್ತಿಯಂತೆ ಹೊಳೆಯುತ್ತಿದೆ. ಆದರೆ ಅದರ ಪಕ್ಕದ ರಸ್ತೆ ಮಾತ್ರ ಕೆಸರುಗದ್ದೆಯಂತಾಗಿದೆ. ಸಮಸ್ಯೆಗಳನ್ನು ಪರಿಹರಿಸಬೇಕಾದ ಆಡಳಿತದ ಕಚೇರಿಯ ಎದುರೇ ಇಂತಹ ದುಸ್ಥಿತಿ ಇರುವುದು ವಿಪರ್ಯಾಸ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯನ್ನು ಜೀರ್ಣೋದ್ಧಾರಗೊಳಿಸಿ ಹೊಸ ರೂಪ ನೀಡಲಾಗಿದೆ. ಆದರೆ ಕಚೇರಿಯ ಎದುರುಗಡೆಯ ರಸ್ತೆ ಮತ್ತು ಸುತ್ತಮುತ್ತಲಿನ ಮೂಲಸೌಕರ್ಯಗಳು ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ಸಾರ್ವಜನಿಕರಿಗೆ ನರಕಯಾತನೆಯಂತಾಗಿದೆ. ಕಚೇರಿಗೆ ತೆರಳುವವರು ಟ್ರಾಫಿಕ್ ಜಾಮ್, ಗುಂಡಿಗಳು ಹಾಗೂ ಕೆಸರನ್ನು ದಾಟಿಕೊಂಡೇ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದೆಡೆ, ನ್ಯಾಯಾಲಯ ಆವರಣದಿಂದ ಆರ್ಟಿಒ ವೃತ್ತದವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಕಾಮಗಾರಿಯ ಭಾಗವಾಗಿ ಎಲ್ಎನ್‌ಟಿ ಸಂಸ್ಥೆಯು ಹಲವು ಕಡೆ ರಸ್ತೆ ಅಗೆದಿದ್ದು, ಸಮರ್ಪಕವಾಗಿ ದುರಸ್ತಿ ಮಾಡದ ಕಾರಣ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಇದರಿಂದ ಪಾದಚಾರಿಗಳಿಗೆ ಪ್ರತ್ಯೇಕವಾಗಿ ನಡೆಯಲು ಅವಕಾಶವಿಲ್ಲದಂತಾಗಿದ್ದು, ರಸ್ತೆಯ ಮಧ್ಯದಲ್ಲಿಯೇ ಜೀವ ಕೈಯಲ್ಲಿ ಹಿಡಿದು ನಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಪಾದಚಾರಿಗಳು ಮತ್ತು ವಾಹನಗಳ ನಡುವೆ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಅಭಿಪ್ರಾಯದಂತೆ, ಜಿಲ್ಲಾಡಳಿತವು ಸಮರ್ಪಕ ಯೋಜನೆ ಇಲ್ಲದೆ ಹಾಗೂ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದೇ ಕಾಮಗಾರಿಗಳನ್ನು ಕೈಗೊಂಡ ಪರಿಣಾಮ ನಗರದಲ್ಲಿ ಟ್ರಾಫಿಕ್ ಸಮಸ್ಯೆ, ರಸ್ತೆ ಹಾನಿ ಮತ್ತು ಸಾರ್ವಜನಿಕರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದನ್ನೂ ಓದಿ:

ರಾಜ್ಯದ ಎರಡನೇ ರಾಜಧಾನಿಯಾಗಿರುವ ಬೆಳಗಾವಿಯಂತಹ ಪ್ರಮುಖ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳ ಸುತ್ತಮುತ್ತಲೇ ಇಂತಹ ಅವ್ಯವಸ್ಥೆ ಕಂಡುಬರುತ್ತಿರುವುದು ಆಡಳಿತದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಕುರಿತು “ಹೊಸ ದಿಗಂತ” ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಬಳಿಕವಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ, ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !