ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಂಗಳದಲ್ಲಿ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಬಿಡುಗಡೆ ಕುರಿತು ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ರಾಕಿಂಗ್ ಸ್ಟಾರ್ ಯಶ್, ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ದೃಶ್ಯಕಾವ್ಯದ ಬಗ್ಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ನೀಡಿರುವ ಹೇಳಿಕೆ ಈಗ ಭಾರತೀಯ ಚಿತ್ರಪ್ರೇಮಿಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ವಿದೇಶದಲ್ಲಿ ಶುಕ್ರವಾರ, ಭಾರತದಲ್ಲಿ ಭಾನುವಾರ ರಿಲೀಸ್!
ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರಕಾರ, ‘ರಾಮಾಯಣ’ ಸಿನಿಮಾವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನವೆಂಬರ್ 6ರ ಶುಕ್ರವಾರದಂದು ತೆರೆಗೆ ತರಲಾಗುತ್ತಿದೆ. ಆದರೆ, ಭಾರತದಲ್ಲಿ ನವೆಂಬರ್ 8ರ ಭಾನುವಾರ (ದೀಪಾವಳಿ ಹಬ್ಬದ ಶುಭ ದಿನ) ರಿಲೀಸ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ವಿದೇಶಗಳಲ್ಲಿ ಸಾಮಾನ್ಯವಾಗಿ ಶುಕ್ರವಾರವೇ ಹೊಸ ಸಿನಿಮಾಗಳನ್ನು ರಿಲೀಸ್ ಮಾಡುವ ಪದ್ಧತಿ ಇರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಭಿಮಾನಿಗಳಲ್ಲಿ ಸ್ಪಾಯ್ಲರ್ ಆತಂಕ
ವಿದೇಶಗಳಲ್ಲಿ ಎರಡು ದಿನ ಮುಂಚಿತವಾಗಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಭಾರತೀಯ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ವಿದೇಶಿ ಪ್ರದರ್ಶನಗಳಿಂದಾಗಿ ದೃಶ್ಯಗಳು ಹೆಚ್‌ಡಿ ರೂಪದಲ್ಲಿ ಲೀಕ್ ಆಗಬಹುದು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕಥೆಯ ಸ್ಪಾಯ್ಲರ್‌ಗಳು ಹರಿದಾಡಬಹುದು ಎಂಬ ಭಯ ಫ್ಯಾನ್ಸ್‌ನಲ್ಲಿದೆ. ಆದ್ದರಿಂದ, ಚಿತ್ರದ ಮೌಲ್ಯ ಕಾಪಾಡಲು ಪ್ರಪಂಚದಾದ್ಯಂತ ಒಂದೇ ದಿನ ಸಿನಿಮಾವನ್ನು ರಿಲೀಸ್ ಮಾಡಬೇಕೆಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆದ ಟ್ರೇಲರ್!
ನಿತೇಶ್ ತಿವಾರಿ ಅವರ ಅದ್ಭುತ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರದ ಟ್ರೇಲರ್ ಕೆಲವೇ ದಿನಗಳಲ್ಲಿ ಕೋಟ್ಯಂತರ ವೀಕ್ಷಣೆಗಳನ್ನು ಪಡೆದು ಇತಿಹಾಸ ನಿರ್ಮಿಸಿದೆ.

ಸಿನಿಮಾ ರಂಗಕ್ಕೆ ಹೊಸ ಮೈಲಿಗಲ್ಲು!
ಭಾರತೀಯ ಪೌರಾಣಿಕ ಕಥೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನದೊಂದಿಗೆ ಬೆಳ್ಳಿಪರದೆಗೆ ತರುತ್ತಿರುವುದು ದೇಶ ಹೆಮ್ಮೆಪಡುವ ವಿಷಯವಾಗಿದೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲೇ ಭಾರತೀಯ ಪ್ರೇಕ್ಷಕರಿಗೆ ಪ್ರಭು ಶ್ರೀರಾಮನ ದಿವ್ಯ ದರುಶನವಾಗಲಿದ್ದು, ಈ ಚಿತ್ರವು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಯಶಸ್ಸು ಸಾಧಿಸಲಿದೆ ಎಂಬ ದೃಢ ಭರವಸೆ ವ್ಯಕ್ತವಾಗಿದೆ.



