September 23, 2026
Wednesday, September 23, 2026
spot_img

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್​ಗೆ ಹೋಗಿದ್ದ ಉದ್ಯಮಿ ಪುತ್ರ ನಿಗೂಢ ನಾಪತ್ತೆ: ತೀವ್ರಗೊಂಡ ಶೋಧ ಕಾರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣ, ‘ದಕ್ಷಿಣಕಾಶಿ’ ಎಂದೇ ಖ್ಯಾತಿಯಾದ ಶಿವಗಂಗೆ ಬೆಟ್ಟದಲ್ಲಿ ಯುವಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ನಾಪತ್ತೆಯಾದ ಯುವಕನನ್ನು ಉದ್ಯಮಿಯೊಬ್ಬರ ಪುತ್ರ ಪ್ರತೀಕ್ ಎಂದು ಗುರುತಿಸಲಾಗಿದ್ದು, ಇವರ ಕಾಣೆಯಾಗಿರುವ ಹಿಂದೆ ಸದ್ಯ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಬುಲೆಟ್ ಬೈಕ್ ಪಾರ್ಕ್ ಮಾಡಿ ಬೆಟ್ಟ ಹತ್ತಿದ್ದ ಯುವಕ:

ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರತೀಕ್ ಉಪಧ್ಯಾಯ ಅವರು ಐದು ದಿನಗಳ ಹಿಂದೆ ವೈಟ್‌ಫೀಲ್ಡ್‌ನಲ್ಲಿ ಬುಲೆಟ್ ಬೈಕ್ ಬಾಡಿಗೆ ಪಡೆದಿದ್ದರು, ನಿನ್ನೆ ಬೆಳಿಗ್ಗೆ ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾಡಲು ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬೆಟ್ಟದ ಕೆಳಭಾಗದಲ್ಲಿ ತಮ್ಮ ಬೈಕ್‌ ಅನ್ನು ಪಾರ್ಕ್ ಮಾಡಿ, ಎಂದಿನಂತೆ ಟ್ರೆಕ್ಕಿಂಗ್‌ಗಾಗಿ ಬೆಟ್ಟ ಏರಿದ್ದಾರೆ. ಆದರೆ, ಬೆಟ್ಟ ಹತ್ತಿದ ಯುವಕ ಸುದೀರ್ಘ ಸಮಯ ಕಳೆದರೂ ವಾಪಸ್ ಮರಳಿ ಬಂದಿಲ್ಲ. ಯುವಕನ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇದನ್ನೂ ಓದಿ:

ನಾಪತ್ತೆಯ ಸುತ್ತ ಹಲವು ಅನುಮಾನಗಳು:

ಅತ್ಯಂತ ಕಡಿದಾದ ಮತ್ತು ಅಪಾಯಕಾರಿ ತಿರುವುಗಳನ್ನು ಹೊಂದಿರುವ ಶಿವಗಂಗೆ ಬೆಟ್ಟದಲ್ಲಿ ಯುವಕ ಕಾಣೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಕಸ್ಮಿಕವಾಗಿ ಕಾಲು ಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆಯೇ? ಅಥವಾ ಬೇರೆನಾದರೂ ಅನಾಹುತ ಸಂಭವಿಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿರುವ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ, ಬೆಟ್ಟದ ಸುತ್ತಮುತ್ತ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಬೆಟ್ಟದ ಮೂಲೆ ಮೂಲೆಗಳನ್ನು ಜಾಲಾಡಲು ವಿಶೇಷ ಡ್ರೋನ್ ಕ್ಯಾಮೆರಾಗಳನ್ನುಬಳಸಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !