September 23, 2026
Wednesday, September 23, 2026
spot_img

‘ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’: ಜಮುಯಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಡಿಕೆಶಿ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಜಮುಯಿಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಆಕೆಯ ಸಹಪಾಠಿಯನ್ನು ಗುಂಪೊಂದು ತಡೆದು ಕಿರುಕುಳ ನೀಡಿ, ಹಲ್ಲೆ ನಡೆಸಿದ ಘಟನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು ಅತ್ಯಂತ ಆತಂಕಕಾರಿ ಎಂದು ಹೇಳಿರುವ ಅವರು, ಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಏನಿದು ಘಟನೆ?

ಜಮುಯಿಯಲ್ಲಿ ಸೆ.19ರಂದು ಕೋಚಿಂಗ್ ತರಗತಿ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದ ಇಬ್ಬರು ಅಪ್ರಾಪ್ತರನ್ನು ಗುಂಪೊಂದು ರಸ್ತೆಯಲ್ಲಿ ತಡೆದು ವಿದ್ಯಾರ್ಥಿನಿಗೆ ಕಿರುಕುಳ ನೀಡಲಾಗಿದ್ದು, ವಿದ್ಯಾರ್ಥಿಯ ಮೇಲೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಯಾನಕ ಪರಿಸ್ಥಿತಿಯಲ್ಲೂ ವಿದ್ಯಾರ್ಥಿನಿಯ ಪರವಾಗಿ ನಿಂತ ಬಾಲಕನ ಧೈರ್ಯವನ್ನು ಶ್ಲಾಘಿಸಿದ್ದಾರೆ. ಮತ್ತೊಬ್ಬರ ಗೌರವಕ್ಕಾಗಿ ಸಂಕಷ್ಟದ ಸಂದರ್ಭದಲ್ಲೂ ಧ್ವನಿ ಎತ್ತುವ ಮನೋಭಾವ ಯುವಜನರಲ್ಲಿ ಇರಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಡೆದಿರುವ ಬಂಧನಗಳನ್ನು ಸ್ವಾಗತಿಸಿರುವ ಸಿಎಂ ಡಿಕೆಶಿ, ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಕಾನೂನಿನ ಅಡಿಯಲ್ಲಿ ಹೊಣೆಗಾರರಾಗಬೇಕು ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !