ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವೂ ಕೂಡ ದಿನಕ್ಕೆ ಹಲವು ಬಾರಿ UPI ಮೂಲಕ ಹಣ ಪಾವತಿ ಮಾಡ್ತೀರಾ? ಹಾಗಾದ್ರೆ ಈ ಸುದ್ದಿ ನಿಮಗೆ. UPI ವಹಿವಾಟುಗಳಿಗೆ ಇನ್ಮುಂದೆ ಶುಲ್ಕ ವಿಧಿಸಲಾಗುತ್ತೆ ಎಂಬ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ.
UPI ಬಳಕೆದಾರರಿಗೆ ಶುಲ್ಕ ಇಲ್ಲ
ಸರ್ಕಾರದ ಪ್ರಕಾರ, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ (P2P) UPI ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ. ಅಂದರೆ ಸ್ನೇಹಿತರು, ಕುಟುಂಬದವರು ಅಥವಾ ಇತರ ವ್ಯಕ್ತಿಗಳಿಗೆ ಹಣ ವರ್ಗಾವಣೆ ಮಾಡುವಾಗ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ.
₹2,000 ಮೇಲ್ಪಟ್ಟ ಪಾವತಿಗಳಿಗೆ MDR?
ಭವಿಷ್ಯದಲ್ಲಿ ವ್ಯಾಪಾರಿ ರಿಯಾಯಿತಿ ದರ (Merchant Discount Rate MDR) ಜಾರಿಯಾದರೆ ಅದು ಎಲ್ಲಾ UPI ಪಾವತಿಗಳಿಗೆ ಅನ್ವಯಿಸುವುದಿಲ್ಲ. ಅನ್ವಯಿಸುವುದು ಕೇವಲ ದೊಡ್ಡ ವರ್ತಕರಿಗೆ ಮಾತ್ರ. ವರದಿಗಳ ಪ್ರಕಾರ, ₹2,000ಕ್ಕಿಂತ ಹೆಚ್ಚಿನ ಕೆಲವು ವ್ಯಾಪಾರಿ ಪಾವತಿಗಳಿಗೆ 0.25%ರಿಂದ 0.4%ರವರೆಗೆ MDR ವಿಧಿಸುವ ಬಗ್ಗೆ ಚರ್ಚೆ ನಡೆದಿದೆ.
ಇದನ್ನೂ ಓದಿ:
ದಿನನಿತ್ಯದ ಪಾವತಿಗಳಿಗೆ ಹೊರೆ ಇಲ್ಲ?
ಹಾಲು, ತರಕಾರಿ, ದಿನಸಿ, ಆಟೋ ಅಥವಾ ಟ್ಯಾಕ್ಸಿ ದರದಂತಹ ಸಾಮಾನ್ಯ ಸಣ್ಣ ಪಾವತಿಗಳು ಪ್ರಸ್ತಾವಿತ ವ್ಯವಸ್ಥೆಯಿಂದ ಪರಿಣಾಮಕ್ಕೊಳಗಾಗುವ ಸಾಧ್ಯತೆ ಕಡಿಮೆ. MDR ಜಾರಿಯಾದರೂ ಅದು ನಿರ್ದಿಷ್ಟ ಮಿತಿ ಮತ್ತು ವಹಿವಾಟುಗಳ ವರ್ಗವನ್ನು ಆಧರಿಸಿರಲಿದೆ ಎನ್ನಲಾಗಿದೆ.
MDR ಜಾರಿಗೆ ಇನ್ನೂ ಅಂತಿಮ ನಿರ್ಧಾರವಿಲ್ಲ
UPI ವಹಿವಾಟುಗಳಿಗೆ MDR ವಿಧಿಸುವ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ ಎಂದು ಸರ್ಕಾರ ತಿಳಿಸಿದೆ. ಸಂಸತ್ತಿನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ NPCI ಅಧ್ಯಕ್ಷತೆಯ ಸಮಿತಿಯು ಈ ಕುರಿತು ಮುಂದಿನ ಕ್ರಮಗಳನ್ನು ಪರಿಶೀಲಿಸಲಿದೆ.
ಜುಲೈ 2026ರಲ್ಲಿ UPI ಮೂಲಕ 2,366 ಕೋಟಿ ವಹಿವಾಟುಗಳು ನಡೆದಿದ್ದು, ಒಟ್ಟು ವಹಿವಾಟಿನ ಮೌಲ್ಯ ಸುಮಾರು ₹29.9 ಲಕ್ಷ ಕೋಟಿ ತಲುಪಿದೆ. ಹಲವು ದೇಶಗಳಲ್ಲಿ UPI ಬಳಕೆಯ ವಿಸ್ತರಣೆಯೂ ಮುಂದುವರಿದಿದೆ.



