August 10, 2026
Monday, August 10, 2026
spot_img

ಕಳೆದ ಮೂರು ವರ್ಷಗಳಿಂದ ಬೆಳಗಾವಿ ಅಭಿವೃದ್ದಿಗೆ ನಯಾಪೈಸೆ ವಿಶೇಷ ಅನುದಾನ ಬಂದಿಲ್ಲ: ಶಾಸಕ ಪಾಟೀಲ್ ವಾಗ್ದಾಳಿ

ಹೊಸದಿಗಂತ ವರದಿ ಬೆಳಗಾವಿ:

ನಾವು ಸರ್ಕಾರದ ಅವಧಿ ಮುಗಿಸುವುದಿಲ್ಲ. ಜನರೇ ಸರ್ಕಾರದ ಅವಧಿ ಮುಗಿಸುತ್ತಾರೆ. ರಾಜ್ಯ ಸರ್ಕಾರದ ಎಕ್ಸ್ಪೈರಿ ಡೇಟ್ ಹತ್ತಿರ ಬಂದಿದೆ ಎಂದು ಶಾಸಕ ಅಭಯ ಪಾಟೀಲ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸೋಮವಾರ ನಗರ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಬೆಳಗಾವಿ ನಗರದ ಅಭಿವೃದ್ಧಿಗೆ ವಿಶೇಷ ಅನುದಾನವಾಗಿ ಪೈಸೆಯೂ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

ಹಿಂದಿನ ಅವಧಿಯಲ್ಲಿ ಪ್ರತಿವರ್ಷ ಸುಮಾರು ₹100 ಕೋಟಿ ನಗರ ಅಭಿವೃದ್ಧಿಗೆ ಅನುದಾನ ಬರುತ್ತಿತ್ತು. ಆದರೆ ಇದೀಗ ಅದೂ ಸ್ಥಗಿತಗೊಂಡಿದೆ ಎಂದು ದೂರಿದರು.

ಇದನ್ನೂ ಓದಿ:

ಪ್ರಧಾನಮಂತ್ರಿ ಆವಾಸ್ ಯೋಜನೆ ಕುರಿತು ಮಾತನಾಡಿದ ಅವರು, ಹಿಂದೆ ಪ್ರತಿವರ್ಷ 500ರಿಂದ 1,000 ಮನೆಗಳು ಮಂಜೂರಾಗುತ್ತಿದ್ದವು. ಆದರೆ ಕಳೆದ ಮೂರು ವರ್ಷಗಳಿಂದ ಹೊಸ ಮನೆಗಳ ಮಂಜೂರಾತಿ ಶೂನ್ಯವಾಗಿದೆ. ಹಿಂದಿನ ಸರ್ಕಾರ ಅನುಮೋದಿಸಿದ್ದ 1,400 ಮನೆಗಳ ಪೈಕಿ ಸುಮಾರು 1,000 ಮನೆಗಳನ್ನು ರದ್ದುಪಡಿಸಲಾಗಿದೆ ಎಂದು ಆರೋಪಿಸಿದರು.

ಗಣೇಶೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ರಸ್ತೆ ದುರಸ್ತಿ, ಸ್ವಚ್ಛತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳಿಗೆ ಮಹಾನಗರ ಪಾಲಿಕೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

“ಇಷ್ಟು ದಿನ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಹೇಳುತ್ತಿದ್ದೆವು. ಈಗ ಸರ್ಕಾರ ಮಾನಸಿಕವಾಗಿಯೂ ದಿವಾಳಿಯಾಗಿದೆ. ಮುಖ್ಯಮಂತ್ರಿ ಬದಲಾದರೂ ನೇಮ್ ಪ್ಲೇಟ್ ಮಾತ್ರ ಬದಲಾಗಿದೆ; ಕಾರ್ಯಶೈಲಿ ಬದಲಾಗಿಲ್ಲ” ಎಂದು ಅಭಯ ಪಾಟೀಲ ಸರ್ಕಾರವನ್ನು ಟೀಕಿಸಿದರು.

ನಗರದ ಅಭಿವೃದ್ಧಿ, ವಸತಿ ಯೋಜನೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದರೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !