ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಅಪರಿಚಿತರಿಂದ ಜೀವ ಬೆದರಿಕೆ ಪತ್ರಗಳು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆದರಿಕೆ ಪತ್ರಗಳ ಕುರಿತು ಗಂಗೂಲಿ ಅವರ ಕಚೇರಿ ಮೂಲಕ ಕೋಲ್ಕತ್ತಾ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣದ ತನಿಖೆ ಆರಂಭಿಸಲಾಗಿದೆ.
ಹಲವು ತಿಂಗಳಿಂದ ಬರುತ್ತಿದ್ದ ಬೆದರಿಕೆ ಪತ್ರ
ಮಾಹಿತಿಯ ಪ್ರಕಾರ, ಗಂಗೂಲಿ ಅವರ ಕಚೇರಿಗೆ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಪತ್ರಗಳು ಬರುತ್ತಿದ್ದವು. ಆರಂಭದಲ್ಲಿ ಅವುಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ. ಆದರೆ ಇತ್ತೀಚೆಗೆ ಬಂದ ಪತ್ರಗಳಲ್ಲಿ ಗಂಗೂಲಿ ದಂಪತಿಗೆ ನೇರ ಬೆದರಿಕೆ ಹಾಕಲಾಗಿದ್ದು, ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಆಗಸ್ಟ್ 10ರಂದು ದಕ್ಷಿಣ ಕೋಲ್ಕತ್ತಾದ ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ:
ಪತ್ರದ ಮೂಲ ಪತ್ತೆಗೆ ಪೊಲೀಸರ ಪ್ರಯತ್ನ
ಬೆದರಿಕೆ ಪತ್ರಗಳು ಕೊರಿಯರ್ ಮೂಲಕ ಬಂದಿರುವ ಹಿನ್ನೆಲೆಯಲ್ಲಿ, ಅವುಗಳ ಮೂಲ ಮತ್ತು ಕಳುಹಿಸಿದ ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪತ್ರದಲ್ಲಿರುವ ವಿವರಗಳು, ಮೊಬೈಲ್ ಸಂಖ್ಯೆ ಹಾಗೂ ಇತರ ತಾಂತ್ರಿಕ ಮಾಹಿತಿಯನ್ನು ಸೈಬರ್ ವಿಭಾಗ ಪರಿಶೀಲಿಸುತ್ತಿದೆ.
ಗಂಗೂಲಿ ದಂಪತಿಗೆ ಭದ್ರತೆ
ಬೆದರಿಕೆ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ, ಡೋನಾ ಗಂಗೂಲಿ ಹಾಗೂ ಅವರ ನಿವಾಸದ ಭದ್ರತೆಯನ್ನು ಪೊಲೀಸರು ಹೆಚ್ಚಿಸಿದ್ದಾರೆ. ಪತ್ರಗಳನ್ನು ಕಳುಹಿಸಿದವರು ಯಾರು ಮತ್ತು ಬೆದರಿಕೆಯ ಹಿಂದಿರುವ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.



