August 14, 2026
Friday, August 14, 2026
spot_img

ಭವಿಷ್ಯದ ನೀರಿನ ಸಂಕಷ್ಟಕ್ಕೆ ಮಳೆ ನೀರು ಸಂಗ್ರಹಣೆಯೇ ಪರಿಹಾರ: ಕೋಟೆ ನಾಡಿನಲ್ಲಿ ಮೂಡಿದ ಜಾಗೃತಿ

ಹೊಸದಿಗಂತ ವರದಿ ಚಿತ್ರದುರ್ಗ:

ಮಳೆ ನೀರು ಸಂಗ್ರಹಣೆ ಮಾಡುವುದರಿಂದ ನಗರದಲ್ಲಿನ ನೀರಿನ ಕೊರತೆ ನಿವಾರಿಸಬಹುದು ಎಂದು ನಗರಸಭೆಯ ಕಿರಿಯ ಅಭಿಯಂತರರಾದ ಆರ್.ಕೆ.ಮುನಿಸ್ವಾಮಿ ಹೇಳಿದರು.

ಚಿತ್ರದುರ್ಗ ನಗರಸಭೆ ಕಾರ್ಯಾಲಯ, ರೈನ್ ಟ್ರಸ್ಟ್ ಸಂಸ್ಥೆ, ಬಾಲಕಿಯರ ಸರ್ಕಾರಿ ಕಾಲೇಜು ಹಾಗೂ ಡಾನ್ ಬೋಸ್ಕ್ ಶಾಲೆಯ ವಿದ್ಯಾರ್ಥಿಗಳಿಂದ ಪೌರಾಡಳಿತ ಇಲಾಖೆಯವರ ಸೂಚನೆಯಂತೆ ಮಳೆ ನೀರು ಸಂಗ್ರಹಣೆ ಅಭಿಯಾನ-2026ರ ಅಂಗವಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೀರಿನ ಬವಣೆ ತಪಿಸಲು ನೀರು ಸಂಗ್ರಹಣೆಯೇ ಪರಿಹಾರ

ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಪದೇ ಪದೇ ಬರದ ಛಾಯೆ ಆವರಿಸುತ್ತಿದೆ. ಇದರಿಂದ ಅಂತರ್ಜಲಮಟ್ಟ ಕಡಿಮೆಯಾಗಿದೆ. ಕುಡಿಯುವ ನೀರಿಗೂ ಕೊರತೆ ಉಂಟಾಗುತ್ತಿದೆ. ಇಂತಹ ಸಮಯದಲ್ಲಿ ನಗರಸಭೆಯಿಂದ ನೀರು ಪೂರೈಸುವುದು ಸಹ ವ್ಯತ್ಯಯವಾಗುತ್ತಿದೆ. ಹಾಗಾಗಿ ಮಳೆಗಾಲದ ಸಂದರ್ಭದಲ್ಲಿ ಬರುವ ಮಳೆಯ ನೀರನ್ನು ಜನರು ಮನೆಗಳಲ್ಲಿ ಸಂಗ್ರಹ ಮಾಡಿಕೊಂಡಲ್ಲಿ ನೀರಿನ ಬವಣೆ ತಪ್ಪಿಸಬಹುದು ಎಂದರು.

ನೀರು ತುಂಬಾ ಅಮೂಲ್ಯವಾದ ವಸ್ತು

ನೀರಿಲ್ಲದಿದ್ದಲ್ಲಿ ಭೂಮಿಯ ಮೇಲಿನ ಪ್ರಾಣಿಗಳು ಸೇರಿದಂತೆ ಸಕಲ ಚರಾಚರ ಜೀವಿಗಳು ಬದುಕುವುದು ಕಷ್ಟವಾಗುತ್ತದೆ. ಆದ್ದರಿಂದಲೇ ಅದನ್ನು ಜೀವಜಲ ಎಂದು ಕರೆಯುತ್ತಾರೆ. ಹಾಗಾಗಿ ಅದನ್ನು ಅನಗತ್ಯ ವ್ಯರ್ಥ ಮಾಡಬಾರದು. ಇಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಹರಸಾಹಸ ಮಾಡುವಂತಾಗಿದೆ. ಮಳೆಗಾಲದಲ್ಲಿ ಮೋಡದಿಂದ ಸುರಿಯುವ ನೀರು ಅತ್ಯಂತ ಶುದ್ಧವಾಗಿದ್ದು, ಅದನ್ನು ಕುಡಿಯುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಳೆ ನೀರು ಸಂಗ್ರಹ ಮಾಡುವುದು ಉತ್ತಮ ಎಂದು ಸಲಹೆ ಮಾಡಿದರು.

ವಿದ್ಯಾರ್ಥಿಗಳಿಂದ ಜನಜಾಗೃತಿ

ಜಾಥಾದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿಧ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು, ನಗರಸಭೆ ಸಿಬ್ಬಂದಿಗಳು, ಕಲಾವಿದರು, ಹೋರಾಟಗಾರರು ಮತ್ತು ವಿವಿಧ ಸಂಘ-ಸಂಘಟನೆಗಳ ಮುಖಂಡರುಗಳ ನೇತೃತ್ವದಲ್ಲಿ ಜಾಥ ಹಮ್ಮಿಕೊಳ್ಳಲಾಗಿತ್ತು. ಹಳೇ ಸರ್ಕಾರಿ ಮೈದಾನದಿಂದ ಮಳೆ ನೀರು ಸಂಗ್ರಹಣೆ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ಮಳೆ ನೀರು ಸಂಗ್ರಹಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.\

ಇದನ್ನೂ ಓದಿ;

ಜಾಥಾದಲ್ಲಿ ಪ್ಲೇಕ್ಸ್‌ಗಳು, ಬ್ಯಾನರ್‌ಗಳು ಮತ್ತು ಆಟೋದಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಾ ವಿಧ್ಯಾರ್ಥಿಗಳು ಸಾಗಿದರು. ಜಾಥದಲ್ಲಿ ನಗರಸಭೆ ಸಿಬ್ಬಂದಿ, ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ್, ಹೋರಾಟಗಾರ ಶಶಿಧರ್ ಎಂ.ಹೆಚ್, ರೈನ್ ಟ್ರಸ್ಟ್ ಕಾರ್ಯದರ್ಶಿ ಎಂ.ಮಂಜುನಾಥ್ ಕಳ್ಳಿಹಟ್ಟಿ, ಲಿಂಗರಾಜು, ಕಲಾವಿದರಾದ ರವಿಕುಮಾರ್, ಶಾಂಭವಿ, ನೇತ್ರಾವತಿ ಪಿ.ಆರ್, ಉಷಾ, ಗಿರೀಶ್ ಕವಾಡಿಗರಹಟ್ಟಿ, ಮಲ್ಲೇಶ್ ಮೆದೇಹಳ್ಳಿ, ಯಶವಂತ್ ಮಠದಹಟ್ಟಿ, ಬಾಲಕಿಯರ ಕಾಲೇಜಿನ ವಿದ್ಯಾರ್ಥಿಗಳು, ಡಾನ್ ಬೋಸ್ಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !