ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಕಪಾಳಮೋಕ್ಷ ನಡೆಸಿದ್ದಾರೆ ಎನ್ನಲಾದ ಘಟನೆಯ ಬೆನ್ನಿಗೇ ಪ್ರತಿಕ್ರಿಸಿರುವ ಶಾಸಕರು, ಈ ಬಗ್ಗೆ ತಮ್ಮ ಮಗಳಿಂದ ತಪ್ಪಾಗಿದ್ದಲ್ಲಿ ಅವಳ ಪರ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನನ್ನ ಮಗಳು ಸಬ್ ಇನ್ಸ್‌ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ವಿಷಯವಾಗಿ ಕ್ಷಮೆ ಕೇಳುತ್ತೇನೆ. ಸಂಪೂರ್ಣ ಮಾಹಿತಿ ನನಗೆ ಗೊತ್ತಿಲ್ಲ. ಎರಡೂ ಕಡೆಯ ವಿವರಣೆ ಪಡೆದ ನಂತರ ಉಳಿದಂತೆ ಮಾತನಾಡುತ್ತೇನೆ ಎಂದಿದ್ದಾರೆ.
ಕ್ರಿಯೆಗೆ ಪ್ರತಿ ಕ್ರಿಯೆ ಇದ್ದೇ ಇರುತ್ತದೆ
ನನ್ನ ಮಗಳು ಇಬ್ಬರು ಮಕ್ಕಳೊಂದಿಗೆ ಭೀಮನ ಅಮವಾಸ್ಯೆ ದಿನ ಆರತಿ ಉಕ್ಕಡ ದೇವಸ್ಥಾನಕ್ಕೆ ಹೋಗಿದ್ದಳು. ಅಲ್ಲಿ ಕರ್ತವ್ಯದಲ್ಲಿ ಸಬ್ ಇನ್ಸ್‌ಪೆಕ್ಟರ್ ಅವಳನ್ನು ಒಳಕ್ಕೆ ಬಿಟ್ಟಿಲ್ಲ. ವಿಐಪಿ ಸಾಲಿನಲ್ಲಿ ನಿಂತಿದ್ದಾಗ ಬೇರೆಯವರನ್ನು ಮೊದಲು ಒಳಕ್ಕೆ ಬಿಟ್ಟಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಅನ್ನೋದು ಇದ್ದೇ ಇರುತ್ತದೆ. ಮಾತಿಗೆ ಮಾತು ಬೆಳೆದು ಅಹಿತಕರ ಘಟನೆ ನಡೆದಿದೆ. ಅಲ್ಲಿ ಏನಾಗಿತ್ತು ಎನ್ನುವ ಸಂಪೂರ್ಣ ಮಾಹಿತಿ ಪಡೆದ ನಂತರ ಮಾತನಾಡುತ್ತೇನೆ.
ಪೊಲೀಸರ ಕಡೆಯ ಮಾತು ಹಾಗೂ ಮಗಳ ಮಾತು ಎರಡನ್ನೂ ಕೇಳುತ್ತೇನೆ. ಪೊಲೀಸ್ ಅಧಿಕಾರ ಜತೆ ಮಾತನಾಡುತ್ತೇನೆ. ಆನಂತರ ನಿರ್ಧಾರಕ್ಕೆ ಬರೋಣ. ನನ್ನ ಮಗಳ ತಪ್ಪು ಇದ್ದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿಸುತ್ತೇನೆ. ಆಕೆ ತಾಳ್ಮೆ ಕಳೆದುಕೊಂಡು ವರ್ತಿಸಿದ್ದಾಳೆ. ಹೀಗೆ ಮಾಡಿದ್ದು ತಪ್ಪು ಹಾಗಾಗಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ದೇವಸ್ಥಾನದಲ್ಲಿ ಏನಾಗಿತ್ತು?
ಆ.12ರಂದು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಈ ವೇಳೆ ಐಶ್ವರ್ಯ ವಿಐಪಿ ಸಾಲಿನಲ್ಲಿ ನಿಂತಿದ್ದರು. ಗರ್ಭಗುಡಿ ಬಳಿ ಬಂದ ನಂತರ ಇನ್ನೂ ಒಳಕ್ಕೆ ಬಿಡಿ ಎಂದು ಕೇಳಿದ್ದಾರೆ. ಹೆಚ್ಚು ಜನರಿದ್ದಾರೆ ಆಗೋದಿಲ್ಲ. ನಿಮ್ಮನ್ನು ಒಳಗೆ ಬಿಟ್ಟರೆ ಬೇರೆಯವರು ಕೇಳುತ್ತಾರೆ. ಸ್ವಲ್ಪ ರಶ್ ಕಡಿಮೆಯಾಗುವವರೆಗೂ ಕಾಯಿರಿ ಎಂದು ಪಿಎಸ್‌ಐ ಸವಿತಾ ಹೇಳಿದ್ದಾರೆ.
ಅದೇ ಸಮಯದಲ್ಲಿ ಮಫ್ತಿಯಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮಿ ಅವರು ಗರ್ಭಗುಡಿಯ ಒಳಕ್ಕೆ ಹೋಗಿದ್ದಾರೆ. ಅವರನ್ನು ಬಿಟ್ಟಿದ್ದೀರಿ ನನ್ನನ್ನು ಬಿಡಿ ಎಂದು ಐಶ್ವರ್ಯಾ ಕೇಳಿದ್ದಾರೆ. ಅದಕ್ಕೆ ಸವಿತಾ ಅವರು ಡ್ಯೂಟಿ ಇನ್ಸ್‌ಪೆಕ್ಟರ್ ಎಂದಿದ್ದಾರೆ. ಇದನ್ನೆಲ್ಲಾ ಕೇಳದೇ ಕೋಪಗೊಂಡ ಐಶ್ವರ್ಯಾ ನಾನು ಒಳಕ್ಕೆ ಹೋಗಬೇಕು ಎಂದು ಹಠ ಹಿಡಿದಿದ್ದಾರೆ. ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳು ಹೊರಕ್ಕೆ ಬಂದಿವೆ, ಸಿಟ್ಟಿನಲ್ಲಿ ಐಶ್ವರ್ಯಾ ಸವಿತಾ ಅವರ ಕೆನ್ನೆಗೆ ಹೊಡೆದಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಸವಿತಾ ಅವರು ನೀಡಿದ ದೂರಿನನ್ವಯ ಐಶ್ವರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.



