August 14, 2026
Friday, August 14, 2026
spot_img

ಎರಡು ಬಾರಿ ಡಾಟ್‌ಗೆ ಸಿಗದೆ ತಪ್ಪಿಸಿಕೊಂಡಿದ್ದ ನರಹಂತಕ ಕಾಡಾನೆ ಕೊನೆಗೂ ಸೆರೆ

ಹೊಸದಿಗಂತ ವರದಿ ಹಾಸನ :

ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಶಿರಗುರ ಗ್ರಾಮದ ಬಳಿ ಕೆಪಿ ಕಾಲರ್-2 ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಗುರುವಾರ ಬೆಳಗ್ಗೆಯಿಂದ ಸತತ ಏಳು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಡಾನೆ ಸೆರೆ ಕಾರ್ಯಾಚರಣೆ ನಾಗೇನಹಳ್ಳಿ ಗ್ರಾಮದ ಅಂಜೀಹಳ್ಳಿ ಬಳಿ ಬೆಳಗ್ಗೆ ಆರಂಭವಾಗಿತ್ತು. ಬಳಿಕ ಅಂಜೀಹಳ್ಳಿ ಹಾಗೂ ಮತ್ತಿಹಳ್ಳಿ ಬಳಿ ಎರಡು ಬಾರಿ ಕಾಡಾನೆ ಡಾಟ್‌ಗೆ ಸಿಗದೆ ತಪ್ಪಿಸಿಕೊಂಡಿತ್ತು. ಕಾಡಾನೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಟಿಎಫ್ ತಂಡ ಹತ್ತಾರು ಕಿಲೋಮೀಟರ್‌ಗಳಷ್ಟು ಕಾಡಾನೆಯನ್ನು ಹಿಂಬಾಲಿಸಿ ಹರಸಾಹಸಪಟ್ಟರು.

ಕಾಡಾನೆ ಶಿರಗುರ ಗ್ರಾಮದ ಸಮೀಪ ಬಂದಾಗ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯತಂತ್ರ ಬದಲಿಸಿ ಯೋಜನೆ ರೂಪಿಸಿದರು. ಕುಮ್ಕಿ ಆನೆಗಳ ನೆರವಿನಿಂದ ಕಾಡಾನೆಯನ್ನು ರಸ್ತೆಯತ್ತ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು. ರಸ್ತೆಗೆ ಬಂದ ಕಾಡಾನೆಗೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದರು.

ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಕಾಡಾನೆ ಸ್ವಲ್ಪ ದೂರ ಓಡಿ ಹೋಗಿ ಕಾಫಿ ತೋಟದೊಳಗೆ ಮಲಗಿದೆ. ಇದೀಗ ಕಾಡಾನೆ ಬಿದ್ದಿರುವ ಸ್ಥಳಕ್ಕೆ ಕುಮ್ಕಿ ಆನೆಗಳನ್ನು ಕರೆತರಲಾಗುತ್ತಿದ್ದು, ಸಾಕಾನೆಗಳ ನೆರವಿನಿಂದ ಹಗ್ಗ ಕಟ್ಟಿ ಕಾಡಾನೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅರಣ್ಯ ಇಲಾಖೆ ತಂಡ ಸಿದ್ಧತೆ ನಡೆಸಿದೆ.

ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಲ್ಲೇ ಡಿಎಫ್‌ಓ ಸೌರಭ್‌ಕುಮಾರ್, ಪಿಸಿಸಿಎಫ್ ಏಡುಕುಂಡಲ ಸೇರಿದಂತೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಜಿಲ್ಲಾಧಿಕಾರಿ ಲತಾ ಕುಮಾರಿ ಕೂಡ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಪ್ರಗತಿ ವೀಕ್ಷಿಸಿದರು.

ಕಾರ್ಯಾಚರಣೆಯಲ್ಲಿ ಧನಂಜಯ, ಪ್ರಶಾಂತ, ಈಶ್ವರ, ಮಹೇಂದ್ರ, ಲಕ್ಷ್ಮಣ, ಏಕಲವ್ಯ ಹಾಗೂ ಅಜ್ಜಯ್ಯ ಸೇರಿದಂತೆ ಇಟಿಎಫ್ ಸಿಬ್ಬಂದಿ, ವೈದ್ಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಈ ಕಾಡಾನೆ ಈ ಹಿಂದೆ ಎರಡು ಬಾರಿ ಸೆರೆ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಕಾಡಾನೆಗೆ ಅರವಳಿಕೆ ನೀಡುವಲ್ಲಿ ಯಶಸ್ವಿಯಾಗಿರುವುದು ಅರೇಹಳ್ಳಿ ಹೋಬಳಿಯ ಗ್ರಾಮಸ್ಥರಲ್ಲಿ ನಿರಾಳತೆ ಮೂಡಿಸಿದೆ.

ಕಾಡಾನೆಯನ್ನು ಸಾಕಾನೆಗಳ ನೆರವಿನಿಂದ ಹಗ್ಗ ಕಟ್ಟಿ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದ್ದು, ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಅರಣ್ಯ ಇಲಾಖೆ ಕಾಡಾನೆಯನ್ನು ಯಾವ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ ಎಂಬುದರ ಕುರಿತು ಮಾಹಿತಿ ನೀಡುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !