ಹೊಸದಿಗಂತ ವರದಿ ಯಲ್ಲಾಪುರ:
ರಾಜ್ಯ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪಾದನೆ, ಮಾರಾಟದ ಮೇಲೆ ನಿಷೇಧ ಹೇರಿರುವ ಕ್ರಮವು, ಅಡಿಕೆ ಬೆಳೆಯನ್ನೇ ನಂಬಿ ಬದುಕುತ್ತಿರುವ ಕೃಷಿಕರ, ವ್ಯಾಪಾರಿಗಳ ಮೇಲೆ ಏಕಾಏಕಿ ಗಧಾ ಪ್ರಹಾರ ಮಾಡಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 9.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯುತ್ತಿದ್ದು, ಇದರಲ್ಲಿ ಸುಮಾರು 6 ಲಕ್ಷ ಹೆಕ್ಟೇರ್ ಕರ್ನಾಟಕದಲ್ಲಿದೆ. ದೇಶದ ಅಡಕೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.76ಕ್ಕಿಂತ ಹೆಚ್ಚಿದೆ. ಹೀಗಿರುವಾಗ ರಾಜ್ಯದಲ್ಲೇ ಅಡಿಕೆ ಆಧಾರಿತ ಉತ್ಪನ್ನಗಳ ಮೇಲೆ ನಿಷೇಧ ಹೇರುವ ಕ್ರಮ ಸರಿಯಲ್ಲ ಎಂದಿದ್ದಾರೆ.
ಅಡಿಕೆ ಹಾಗೂ ಅಡಿಕೆ ಆಧಾರಿತ ಉತ್ಪನ್ನಗಳಿಂದ ವಾರ್ಷಿಕ ಸುಮಾರು 496 ಕೋಟಿ ಜಿಎಸ್‌ಟಿ ಆದಾಯ ಸರ್ಕಾರಕ್ಕೆ ಬರುತ್ತಿದೆ. ಸುಮಾರು 1.25 ಕೋಟಿ ಜನರು ಅಡಕೆ ಕೃಷಿ ಹಾಗೂ ಅದರೊಂದಿಗೆ ನೇರ ಅಥವಾ ಪರೋಕ್ಷವಾಗಿ ಅವಲಂಬಿತರಾಗಿದ್ದಾರೆ. ಹೀಗಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅಡಕೆ ಬೆಳೆಗಾರರ ಬದುಕಿನ ಮೇಲಿನ ಪರಿಣಾಮವನ್ನೂ ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿದ ಅವರು ಸರಕಾರ ಮೊದಲು ಆರೋಗ್ಯಕ್ಕೆತೀವ್ರ ಹಾನಿಕಾರಕವಾಗಿರುವ ಮದ್ಯ, ಸಿಗರೇಟು, ತಂಬಾಕು ನಿಷೇದ ಮಾಡಲಿ. ಏಕಾಏಕಿ, ಗುಟ್ಕಾ, ಪಾನ್ ಮಾರಾಟದ ಮೇಲೆ ನಿಷೇಧ ಹೇರಿರುವುದು ಅಡಿಕೆ ಬೆಳೆಗಾರರಿಗೆ ಆತಂಕ ತಂದಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸದಿದ್ದರೆ, ಅಡಕೆ ಬೆಳೆಗಾರರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರಿಸುವ ವಿಚಾರಕ್ಕೂ ಅವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಜಿಲ್ಲೆಯ ಜನರಿಗೆ ಸಮಯ ಹಾಗೂ ಹಣದ ಅನಗತ್ಯ ಹೊರೆ ಬೀಳಲಿದೆ ಎಂದರು.
ಇದನ್ನೂ ಓದಿ:
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಡಿಪಿಆರ್ ಸಿದ್ಧವಾಗಿರುವುದು ಜಿಲ್ಲೆಯ ಪಾಲಿಗೆ ಆಶಾದಾಯಕ ಬೆಳವಣಿಗೆ. ಹಲವು ವರ್ಷಗಳ ಕನಸಾಗಿರುವ ಈ ಯೋಜನೆ ನನಸಾಗುತ್ತಿರುವುದು ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದರು.
ಈ ಸಂಧರ್ಭದಲ್ಲಿ ಮಂಡಲದ ಅಧ್ಯಕ್ಷ ಪ್ರಸಾದ್ ಹೆಗಡೆ, ಜಿಲ್ಲಾ ಪ್ರಮುಖರಾದ ಉಮೇಶ ಭಾಗ್ವತ್,ರಾಘವೇಂದ್ರ ಭಟ್ ಹಾಸಣಗಿ ಇದ್ದರು.



