ಬೆಳಗಿನ ಉಪಹಾರಕ್ಕೆ ಪ್ರತಿದಿನ ಏನು ಮಾಡುವುದು ಎಂಬ ಗೊಂದಲ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಆರೋಗ್ಯಕರ ಮತ್ತು ದಿನಪೂರ್ತಿ ಶಕ್ತಿ ನೀಡುವ ಉಪಹಾರ ಬೇಕಿದ್ದರೆ, ಪಾಲಕ್ ಆಲೂ ಪರೋಟ ಅತ್ಯುತ್ತಮ ಆಯ್ಕೆ. ಪಾಲಕ್ ಸೊಪ್ಪಿನಲ್ಲಿರುವ ಐರನ್, ವಿಟಮಿನ್ ಹಾಗೂ ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ನೈಸರ್ಗಿಕ ಶಕ್ತಿಯನ್ನು ಒದಗಿಸುತ್ತವೆ.
ಬೇಕಾಗುವ ಅಗತ್ಯ ಪದಾರ್ಥಗಳು
- ಪಾಲಕ್ ಸೊಪ್ಪು: 1 ಕಟ್ಟು (ರುಬ್ಬಿಕೊಂಡಿದ್ದು)
- ಗೋಧಿ ಹಿಟ್ಟು: 2 ಕಪ್
- ಬೇಯಿಸಿದ ಆಲೂಗಡ್ಡೆ: 2
- ಹಸಿಮೆಣಸಿನಕಾಯಿ ಮತ್ತು ಶುಂಠಿ ಪೇಸ್ಟ್: 1 ಚಮಚ
- ಖಾರದ ಪುಡಿ, ಜೀರಿಗೆ ಮತ್ತು ಗರಂ ಮಸಾಲ
- ರುಚಿಗೆ ತಕ್ಕಷ್ಟು ಉಪ್ಪು ಮತ್ತು ತುಪ್ಪ/ಎಣ್ಣೆ
ಮಾಡುವ ಸುಲಭ ವಿಧಾನ
ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಪಾಲಕ್ ಪ್ಯೂರಿ, ಬೇಯಿಸಿ ಹಿಸುಕಿದ ಆಲೂಗಡ್ಡೆ, ಹಸಿಮೆಣಸಿನಕಾಯಿ-ಶುಂಠಿ ಪೇಸ್ಟ್, ಖಾರದ ಪುಡಿ, ಜೀರಿಗೆ, ಗರಂ ಮಸಾಲ ಮತ್ತು ಉಪ್ಪು ಹಾಕಿ. ನೀರನ್ನು ಅಗತ್ಯವಿದ್ದರೆ ಮಾತ್ರ ಸ್ವಲ್ಪ ಬಳಸಿ, ಮೆದುವಾಗಿ ಹಿಟ್ಟು ನಾದಿ. 10 ನಿಮಿಷಗಳ ಕಾಲ ಮುಚ್ಚಿಡಿ.
ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಲಟ್ಟಿಸಿ. ಬಿಸಿಯಾದ ಹಂಚಿನ ಮೇಲೆ ಹಾಕಿ, ಎರಡೂ ಬದಿಗಳಿಗೆ ತುಪ್ಪ ಅಥವಾ ಎಣ್ಣೆ ಸವರಿ ಹೊಂಬಣ್ಣ ಬರುವವರೆಗೆ ಬೇಯಿಸಿ.
ಈ ಬಿಸಿ ಬಿಸಿ ಪಾಲಕ್ ಆಲೂ ಪರೋಟವನ್ನು ಮೊಸರು, ಉಪ್ಪಿನಕಾಯಿ ಅಥವಾ ಬೆಣ್ಣೆಯೊಂದಿಗೆ ಸೇವಿಸಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ!



