ಹೊಸದಿಗಂತ ವರದಿ ಉಳ್ಳಾಲ:
ಕೋಟೆಕಾರು ಬೀರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ವಲಸೆ ಕಾರ್ಮಿಕರಿಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ಸಂಬಂಧ ಕಟ್ಟಡ ಮಾಲೀಕ ಉದಯ್ ಕುಮಾರ್ ಮತ್ತು ಗುತ್ತಿಗೆದಾರ ಆಶಿತ್ ಶೆಟ್ಟಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡನೇ ಮಹಡಿಯಿಂದ ಬಿದ್ದು ಕಾರ್ಮಿಕರಿಗೆ ಗಾಯ
ಕೋಟೆಕಾರು ಅಜ್ಜಿನಡ್ಕದ ವಿಜಿ ಕಾಂಡಿಮೆಂಟ್ಸ್ ಮಾಲೀಕ ಹಾಗೂ ತಮಿಳುನಾಡು ಮೂಲದ ಉದಯ್ ಕುಮಾರ್ ಅವರ ಒಡೆತನದ ಬೀರಿ ಮ್ಯಾರೇಜ್ ಮಹಲ್ ಸಮೀಪ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯವರಾದ ಹೈದರ್ (28) ಮತ್ತು ಶಾಕಿಬ್ (22) ಪ್ರಸ್ತುತ ಮಂಜೇಶ್ವರದ ಕುಂಜತ್ತೂರಿನಲ್ಲಿ ವಾಸವಾಗಿದ್ದು, ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು.
ವೆಲ್ಡಿಂಗ್ ಯಂತ್ರ ತರಲು ತೆರಳಿದ್ದಾಗ ಅವಘಡ
ಕಟ್ಟಡದ ಮೇಲ್ಛಾವಣಿಗೆ ಶೀಟ್ ಅಳವಡಿಸುವ ಕಾಮಗಾರಿಯನ್ನು ಆಶಿತ್ ಶೆಟ್ಟಿ ವಹಿಸಿಕೊಂಡಿದ್ದರು. ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಶಾಕಿಬ್, ಹೈದರ್ ಹಾಗೂ ಹೈದರ್ ಅವರ ಬಾಮೈದ ರಿಹಾನ್ (20) ಕೆಲಸ ಮಾಡುತ್ತಿದ್ದರು. ವೆಲ್ಡಿಂಗ್ ಯಂತ್ರ ತರಲು ಶಾಕಿಬ್ ಮತ್ತು ಹೈದರ್ ಎರಡನೇ ಮಹಡಿಗೆ ತೆರಳಿದಾಗ ಶಾಕಿಬ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಹೈದರ್ ಕೂಡ ಕೆಳಭಾಗದಲ್ಲಿದ್ದ ಎಲೆಕ್ಟ್ರಿಕ್ ಡಕ್ಟ್ ಮೇಲೆ ಬಿದ್ದಿದ್ದಾರೆ.
ಇಬ್ಬರಿಗೂ ಗಂಭೀರ ಗಾಯ
ಅವಘಡದಲ್ಲಿ ಶಾಕಿಬ್ ಅವರ ಎಡಗೈ, ಎಡಕಾಲು ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಹೈದರ್ ಅವರ ಹೊಟ್ಟೆ ಮತ್ತು ಕಾಲಿಗೆ ಗಾಯಗಳಾಗಿವೆ. ಇಬ್ಬರನ್ನೂ ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:
ಸುರಕ್ಷತಾ ಕ್ರಮಗಳ ಕೊರತೆ ಆರೋಪ
ಕಾಮಗಾರಿ ವೇಳೆ ಕಾರ್ಮಿಕರಿಗೆ ಸೇಫ್ಟಿ ಬೆಲ್ಟ್, ಹೆಲ್ಮೆಟ್ ಹಾಗೂ ಸುರಕ್ಷತಾ ನೆಟ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಒದಗಿಸಿರಲಿಲ್ಲ ಎಂದು ರಿಹಾನ್ ಆರೋಪಿಸಿದ್ದಾರೆ. ಈ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಿಹಾನ್ ನೀಡಿದ ದೂರಿನ ಆಧಾರದ ಮೇಲೆ ಗುತ್ತಿಗೆದಾರ ಆಶಿತ್ ಶೆಟ್ಟಿ ಮತ್ತು ಕಟ್ಟಡ ಮಾಲೀಕ ಉದಯ್ ಕುಮಾರ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ



