August 14, 2026
Friday, August 14, 2026
spot_img

ಮಹಿಳಾ ಏಷ್ಯಾಕಪ್‌ಗೆ ಭಾರತ ತಂಡ ರೆಡಿ: ಗಾಯದ ಸಮಸ್ಯೆಯಿಂದ ಇಬ್ಬರು ಸ್ಟಾರ್ ಆಟಗಾರ್ತಿಯರು ಔಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಿಳಾ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 2026ರ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಮಹಿಳಾ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಟೂರ್ನಿಯಲ್ಲೂ ತಂಡವನ್ನು ಎಂದಿನಂತೆ ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದು, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಉಪನಾಯಕಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ನಿರೀಕ್ಷಿತ ಹೆಸರುಗಳೇ ಸ್ಥಾನ ಪಡೆದಿವೆ.

ತಂಡಕ್ಕೆ ಗಾಯದ ಆಘಾತ: ಜೆಮಿಮಾ, ಶ್ರೇಯಾಂಕ ಔಟ್

ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಗಾಯದ ದೊಡ್ಡ ಆಘಾತ ಎದುರಾಗಿದೆ. ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಆಧಾರಸ್ತಂಭವಾಗಿದ್ದ ಜೆಮಿಮಾ ರೊಡ್ರಿಗಸ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಜತೆಗೆ ಕರ್ನಾಟಕದ ಹೆಮ್ಮೆಯ ಯುವ ಸ್ಪಿನ್ನರ್ ಶ್ರೇಯಾಂಕ ಪಾಟೀಲ್ ಕೂಡ ಗಾಯದಿಂದ ಇನ್ನು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ತಂಡಕ್ಕೆ ಆಯ್ಕೆಯಾಗಿಲ್ಲ. ಈ ಇಬ್ಬರು ಪ್ರಮುಖ ಆಟಗಾರ್ತಿಯರ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಬಲಿಷ್ಠ ಬ್ಯಾಟಿಂಗ್ ಮತ್ತು ಆಲ್‌ರೌಂಡರ್ ಪಡೆ

ಜೆಮಿಮಾ ಅವರ ಅನುಪಸ್ಥಿತಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗವನ್ನು ನೋಡುವುದಾದರೆ, ಹರ್ಮನ್‌ಪ್ರೀತ್ ಕೌರ್, ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ಸ್ಥಾನದಲ್ಲಿ ಭಾರತಿ ಫುಲ್‌ಮಾಲಿ ಕಣಕ್ಕಿಳಿಯುವ ಸಾಧ್ಯತೆ ಇದೆ, ರಿಚಾ ಘೋಷ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್ ಮತ್ತು ರಾಧಾ ಯಾದವ್. ಬೌಲಿಂಗ್ ವಿಭಾಗದಲ್ಲಿ ಅನುಭವಿ ರೇಣುಕಾ ಸಿಂಗ್ ಠಾಕೂರ್ ಮತ್ತು ನಂದನಿ ಶರ್ಮಾ ವೇಗದ ಜವಾಬ್ದಾರಿ ಹೊತ್ತರೆ, ಸ್ಪಿನ್ನರ್‌ಗಳಾಗಿ ಶ್ರೀಚರಣಿ ಮತ್ತು ಪ್ರೇಮಾ ರಾವತ್ ಇದ್ದಾರೆ.‌

ಇದನ್ನೂ ಓದಿ:

ಸೆ. 5ಕ್ಕೆ ಭಾರತ-ಪಾಕ್ ಮಹಾಸಮರ

ಈ ಬಾರಿಯ ಮಹಿಳಾ ಏಷ್ಯಾಕಪ್ ಟೂರ್ನಿಯು ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ದುಬೈನಲ್ಲಿ ಜರುಗಲಿದೆ. ಟೂರ್ನಿಯ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ಆಗಸ್ಟ್ 30 ರಂದು ಥೈಲ್ಯಾಂಡ್ ವಿರುದ್ಧ ಆಡುವ ಮೂಲಕ ಓ ಟೂರ್ನಿಯನ್ನು ಆರಂಭಿಸಲಿದೆ. ಇನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 5 ರಂದು ನಡೆಯಲಿದೆ. ಭಾರತ ತಂಡವು ಗ್ರೂಪ್ ‘ಎ’ ನಲ್ಲಿದ್ದು, ಪಾಕಿಸ್ತಾನ, ಥೈಲ್ಯಾಂಡ್, ಹಾಂಗ್ ಕಾಂಗ್ ಮತ್ತು ಚೀನಾ ತಂಡಗಳೊಂದಿಗೆ ಪೈಪೋಟಿ ನಡೆಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !