August 15, 2026
Saturday, August 15, 2026
spot_img

ಬೆಂಗಳೂರು ವಿಧಾನಸೌಧದ ಮುಂದೆ ‘ಫ್ರೀಡಂ ಹಬ್ಬ’: ಫ್ರೀಡಂ ಪರೇಡ್, ಸಂಗೀತ ರಸಸಂಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಬೆಂಗಳೂರು ಮತ್ತೊಂದು ಬಣ್ಣದ ಅಧ್ಯಾಯ ಸೇರಿಸಿಕೊಳ್ಳಲು ಸಜ್ಜಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ಇಂದು ಆಯೋಜಿಸಿರುವ ಫ್ರೀಡಂ ಹಬ್ಬದಲ್ಲಿ ಬೆಳಗ್ಗೆಯಿಂದ ರಾತ್ರಿ ತನಕ ಸಂಗೀತ, ನೃತ್ಯ, ಸಾಂಪ್ರದಾಯಿಕ ಕಲೆ ಮತ್ತು ಮಕ್ಕಳ ಪ್ರತಿಭಾ ಪ್ರದರ್ಶನಗಳ ಮೂಲಕ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. 10 ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ.

ಮಕ್ಕಳ ಪ್ರತಿಭೆಗೆ ವೇದಿಕೆ

ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಶಾಲಾ ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು. ವಿವಿಧ ಶಾಲೆಗಳ ಮಕ್ಕಳು ನೃತ್ಯ, ಸಂಗೀತ ಸೇರಿದಂತೆ ಹಲವು ಕಲಾ ಪ್ರಕಾರಗಳ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಅಂಬೇಡ್ಕರ್ ರಸ್ತೆಯಲ್ಲಿ ವಿಶೇಷ ಪರೇಡ್

ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ‘ಫ್ರೀಡಂ ಪರೇಡ್’ ನಡೆಯಲಿದ್ದು. ವಿಧಾನಸೌಧದ ಮುಂಭಾಗದ ಐಪಿಒ ಸರ್ಕಲ್‌ನಿಂದ ಆರಂಭವಾಗುವ ಪರೇಡ್ ತಿಮ್ಮಯ್ಯ ವೃತ್ತದವರೆಗೆ ಸಾಗಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ 15 ತಂಡಗಳ ಜೊತೆಗೆ ದೇಶದ ವಿವಿಧ ರಾಜ್ಯಗಳ 10 ಪ್ರಮುಖ ಕಲಾ ತಂಡಗಳು ತಮ್ಮ ಸಾಂಪ್ರದಾಯಿಕ ಕಲಾ ಪ್ರದರ್ಶನ ನೀಡಲಿವೆ.

ಸಂಜೆ ಸಂಗೀತದ ರಸದೌತಣ

ಸಂಜೆ 5.30ರಿಂದ ರಾತ್ರಿ 10ರವರೆಗೆ ವಿಧಾನಸೌಧದ ಮುಂಭಾಗದ ವೇದಿಕೆಯಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಎಂ.ಡಿ. ಪಲ್ಲವಿ, ಸಂಜಿತ್ ಹೆಗ್ಡೆ ಹಾಗೂ ರಘು ದೀಕ್ಷಿತ್ ಸೇರಿದಂತೆ 20ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:

20 ಸಾವಿರಕ್ಕೂ ಹೆಚ್ಚು ನೋಂದಣಿ

ಕಾರ್ಯಕ್ರಮಕ್ಕೆ ಈಗಾಗಲೇ 20 ಸಾವಿರಕ್ಕೂ ಅಧಿಕ ಮಂದಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಮುಂಗಡ ನೋಂದಣಿ ಮಾಡಿರುವವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

3,000ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ

ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಡಿಸಿಪಿ, ಎಸಿಪಿ ಸೇರಿದಂತೆ 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟಾರೆ 10 ಗಂಟೆಗಳ ‘ಫ್ರೀಡಂ ಹಬ್ಬ’ ಬೆಂಗಳೂರಿನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !