ಹೊಸದಿಗಂತ ಡಿಜಿಟಲ್ ಡೆಸ್ಕ್:
ದೂರದ ದೇಶ, ಅಪರಿಚಿತ ಮುಖಗಳು, ಭಾಷೆಯ ತೊಡಕುಗಳು, ಮತ್ತು ಹಗಲು-ರಾತ್ರಿ ಎನ್ನದೆ ಪಡುವ ಕಷ್ಟ… ಇವೆಲ್ಲದರ ನಡುವೆಯೂ ಕಣ್ಣುಗಳಲ್ಲಿ ಒಂದಿಷ್ಟು ಭರವಸೆಯ ಕನಸುಗಳನ್ನು ಇಟ್ಟುಕೊಂಡು ಹೆಜ್ಜೆ ಹಾಕುವವರು ವಲಸೆ ಕಾರ್ಮಿಕರು. ಸ್ವದೇಶದಲ್ಲಿದ್ದ ಹೆತ್ತವರಿಗೆ, ಕುಟುಂಬಕ್ಕೆ ನಾಲ್ಕು ಕಾಸು ಆಸರೆಯಾಗಲಿ ಎಂದು ತನ್ನವರನ್ನು ತೊರೆದು ಹೋದ ಅವರಿಗೆ, ತಾಯ್ನಾಡಿಗೆ ಮರಳುವ ಕ್ಷಣಕ್ಕಿಂತ ಮಿಗಿಲಾದ ಸಂಭ್ರಮ ಬೇರೊಂದಿಲ್ಲ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಇಂಡೋನೇಷ್ಯಾದ ಯುವತಿಯೊಬ್ಬಳ ಕಥೆ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ಕಣ್ಣೀರು ತರಿಸುವಂತಿದೆ. ತೈವಾನ್ ದೇಶದಲ್ಲಿ ಹಗಲಿರುಳು ದುಡಿದು, ಹಣ ಸಂಪಾದಿಸಿ, ತನ್ನ ತಾಯಿಗೆ ಸುರ್ಪ್ರೈಸ್ ನೀಡಬೇಕೆಂದು ಆಕೆ ಯಾರ ಬಳಿಯೂ ಹೇಳದೆ ತಾಯ್ನಾಡಿಗೆ ಬಂದಿದ್ದಳು. ಹಾದಿಯುದ್ದಕ್ಕೂ ಆಕೆಯ ಮನಸ್ಸಿನಲ್ಲಿ ಒಂದೇ ಆಸೆ ಓಡಿಹೋಗಿ ಅಮ್ಮನನ್ನು ಅಪ್ಪಿಕೊಳ್ಳಬೇಕು, ಆಕೆಯ ಮುಖದಲ್ಲಿ ನಗು ನೋಡಬೇಕು.
ಆದರೆ, ಮನೆ ತಲುಪಿದ ಆಕೆಗೆ ಕಾದಿದ್ದು ಆನಂದಬಾಷ್ಪವಲ್ಲ, ಬದುಕಿನ ಅತ್ಯಂತ ಕ್ರೂರವಾದ ಸತ್ಯ. ಆಕೆ ಪ್ರೀತಿಯಿಂದ ಅಪ್ಪಿಕೊಳ್ಳಬೇಕೆಂದಿದ್ದ ಅಮ್ಮ ಈಗಾಗಲೇ ಈ ಲೋಕವನ್ನೇ ತೊರೆದು ಹೋಗಿದ್ದರು. ತಾಯಿಯ ನಗುವಿನ ಮುಖ ನೋಡಬೇಕಿದ್ದ ಆ ಕಣ್ಣುಗಳು, ಕೊನೆಗೆ ಕಂಡಿದ್ದು ಅಮ್ಮನ ಸಮಾಧಿಯನ್ನು ಮಾತ್ರ!
ಸಾವಿರಾರು ಮೈಲಿ ದೂರದಲ್ಲಿದ್ದು, ಪ್ರತಿಯೊಂದು ದಿನವನ್ನೂ “ಅಮ್ಮನನ್ನು ಮತ್ತೆ ನೋಡುತ್ತೇನೆ” ಎಂಬ ಒಂದೇ ಒಂದು ಆಸೆಯಿಂದ ಕಳೆದ ಆ ಮಗಳ ಎದೆಯಾಳದ ನೋವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಯಾರಿಗೆ ಸರ್ಪ್ರೈಸ್ ಕೊಡಬೇಕಿತ್ತೋ, ಆ ಜೀವವೇ ಇಲ್ಲದಿದ್ದಾಗ ಆಕೆಗೆ ಸಿಕ್ಕಿದ್ದು ಬದುಕಿನ ಶೋಕದ ಆಘಾತ.
ಈ ಕಥೆಯ ಸತ್ಯಾಸತ್ಯತೆ ಏನೇ ಇರಲಿ, ಇದು ಜಗತ್ತಿನ ಮೂಲೆಮೂಲೆಯಲ್ಲಿ ದುಡಿಯುತ್ತಿರುವ ಕೋಟ್ಯಂತರ ಯುವಜನರ ಬದುಕಿನ ಕಟು ವಾಸ್ತವವನ್ನು ನೆನಪಿಸುತ್ತದೆ. ‘ಇನ್ನಷ್ಟು ಸಂಪಾದಿಸೋಣ’, ‘ಇನ್ನೊಂದಿಷ್ಟು ಹಣ ಉಳಿಸಿ ಆಮೇಲೆ ಮನೆಗೆ ಹೋಗೋಣ’ ಎಂಬ ಓಟದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. “ಇನ್ನೂ ಸಮಯ ಇದೆಯಲ್ಲ, ಆಮೇಲೆ ಹೋಗೋಣ” ಎಂದು ಹೆತ್ತವರನ್ನು ನೋಡುವ ಕ್ಷಣಗಳನ್ನು ಮುಂದೂಡುತ್ತಲೇ ಇರುತ್ತೇವೆ.
ಆದರೆ, ಕಾಲ ಮತ್ತು ಹೆತ್ತವರ ವಯಸ್ಸು ನಮಗಾಗಿ ಕಾಯುವುದಿಲ್ಲ. ಹಣವನ್ನು ನಾವು ಮತ್ತೆ ಸಂಪಾದಿಸಬಹುದು, ಆದರೆ ಕಳೆದುಹೋದ ಸಮಯವನ್ನು ಮತ್ತು ಹೆತ್ತವರ ಪ್ರೀತಿಯನ್ನು ಯಾವುದೇ ಬೆಲೆ ಕೊಟ್ಟರೂ ಮತ್ತೆ ತರಲು ಸಾಧ್ಯವಿಲ್ಲ.
ಇಂದೇ ಕರೆ ಮಾಡಿ, ಮಾತಾಡಿ!
ನಿಮ್ಮ ತಂದೆ-ತಾಯಿ ಇಂದಿಗೂ ನಿಮ್ಮ ಜೊತೆಗಿದ್ದರೆ, ನೀವು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ. ನಿಮ್ಮ ಕೆಲಸ ಎಷ್ಟೇ ಒತ್ತಡದಿಂದ ಕೂಡಿದ್ದರೂ, ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆಯಾದರೂ ಅವರ ಧ್ವನಿಯನ್ನು ಆಲಿಸಿ.
“ಅಮ್ಮ ಊಟ ಮಾಡಿದ್ಯಾ?”, “ಅಪ್ಪ ಆರೋಗ್ಯ ಹೇಗಿದೆ?” ಎಂಬ ನಿಮ್ಮ ಒಂದು ಸಣ್ಣ ಮಾತು ಅವರಿಗೆ ಸಾವಿರ ಆನೆಗಳ ಬಲ ನೀಡುತ್ತದೆ. ಹೆತ್ತವರನ್ನು ನೋಡಲು, ಅವರೊಂದಿಗೆ ಸಮಯ ಕಳೆಯಲು ಯಾವುದೇ ವಿಶೇಷ ಸಂದರ್ಭಕ್ಕಾಗಿ ಕಾಯಬೇಡಿ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ.
ಇಂದು ನಾವು ನಿರ್ಲಕ್ಷಿಸುವ ಹೆತ್ತವರ ಆ ಧ್ವನಿ ಮತ್ತು ಪ್ರೀತಿ, ನಾಳೆ ನಮಗೆ ಸಿಗದೆ ಹೋದಾಗ ಅದರ ಬೆಲೆ ಏನೆಂಬುದು ಅರಿವಾಗುತ್ತದೆ. ನೆನಪಿಡಿ, ಸಮಾಧಿಯ ಮುಂದೆ ನಿಂತು ಸುರಿಸುವ ಕಣ್ಣೀರಿಗಿಂತ, ಜೀವಂತವಾಗಿದ್ದಾಗ ನೀಡುವ ಒಂದು ಸಣ್ಣ ಆಲಿಂಗನ ಮತ್ತು ಮುಗುಳುನಗು ಸಾವಿರ ಪಟ್ಟು ಶ್ರೇಷ್ಠ.
ಈ ಕ್ಷಣವೇ ನಿಮ್ಮ ಫೋನ್ ಎತ್ತಿಕೊಳ್ಳಿ, ನಿಮ್ಮ ತಂದೆ-ತಾಯಿಗೆ ಕರೆ ಮಾಡಿ ಮಾತಾಡಿ. ಏಕೆಂದರೆ ಸಮಯ ಯಾರಾಗಿಯೂ ಕಾಯುವುದಿಲ್ಲ!



