ಹೊಸದಿಗಂತ ವರದಿ ಮಡಿಕೇರಿ:
ಯಾವುದೇ ಸಂಘಟನೆಯಾದರೂ ರಾಜ್ಯದಲ್ಲಿ ಕಾನೂನು ಪಾಲಿಸಬೇಕು. ಸರ್ಕಾರಕ್ಕೆ ಅನುಮತಿ ಕೋರಿ ಅರ್ಜಿ ಬಂದರೆ, ನಿಯಮಾನುಸಾರ ಅಗತ್ಯ ಅನುಮತಿ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕು ಎನ್ನುವ ನಿಯಮದ ಬಗ್ಗೆ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಮೊದಲಿನಿಂದಲೂ ಯಾವುದನ್ನೋ ಹಿಡಿದುಕೊಂಡು ರಾಜಕೀಯ ಮಾಡುವುದಿಲ್ಲ. ಯಾರೂ ಗಾಬರಿಪಡುವ ಅಗತ್ಯವಿಲ್ಲ. ಕೃಷ್ಣ ಬೈರೇಗೌಡರು ಸಹ ಫ್ರೀಡಂ ಹಬ್ಬ ಮಾಡಲು ಸರ್ಕಾರದ ಅನುಮತಿ ಪಡೆದರು. ದಳ, ಬಿಜೆಪಿ, ಕಾಂಗ್ರೆಸ್ ಹಾಗೂ ಇತರೆ ಸಂಘಟನೆಗಳು ಯಾರೇ ಆದರೂ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯಕ್ರಮ ನಡೆಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ವೋಟ್ ಚೋರಿ ಹೋರಾಟದ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಜಾಥಾ ಮಾಡಬೇಕಾಗಿತ್ತು. ಆಗ ನಾವು ಅಧಿಕಾರ ದುರುಪಯೋಗ ಮಾಡಬಾರದು ಎಂಬ ಕಾರಣಕ್ಕೆ ಕಾನೂನು ಪಾಲಿಸುವಂತೆ ಮನವಿ ಮಾಡಿದ್ದೆವು. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಗೌರವಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ಇದನ್ನೂ ಓದಿ:
ಅಧಿಕಾರ ದುರುಪಯೋಗ ಸಲ್ಲದು
ನಾವು ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಅಧಿಕಾರ ದುರುಪಯೋಗ ಮಾಡಬಾರದು. ನ್ಯಾಯಾಲಯ ನೀಡಿರುವ ಕಾನೂನಿಗೆ ನಾವು ಗೌರವ ಕೊಡುತ್ತೇವೆ. ಅಂದು ಪರಮೇಶ್ವರ್ ಅವರು ಸೇರಿದಂತೆ ನಾವೆಲ್ಲರೂ ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿ ಕಾನೂನಿಗೆ ಗೌರವ ನೀಡಿದ್ದೆವು ಎಂದು ಡಿಕೆಶಿ ಹೇಳಿದರು.
ಉಪ್ಪಿನ ಸತ್ಯಾಗ್ರಹ, ಚರಕದಿಂದ ಮಾತ್ರ ಸ್ವಾತಂತ್ರ್ಯ ಬರಲಿಲ್ಲ ಎನ್ನುವ ಬಿ.ಎಲ್. ಸಂತೋಷ್ ಅವರ ಹೇಳಿಕೆ ಕುರಿತು ಕೇಳಿದಾಗ, “ಅವರು ಹಿರಿಯರಿದ್ದಾರೆ. ಅವರ ಮಾರ್ಗದರ್ಶನವನ್ನೂ ಕೇಳೋಣ. ಕಾನೂನಿನಲ್ಲಿ ಇದ್ದಂತಹ ಅಂಶಗಳಿಗೆ ನಾವು ಸ್ಪಷ್ಟತೆ ಕೊಟ್ಟಿದ್ದೇವೆ ಅಷ್ಟೇ. ಯಾರೂ ಗಾಬರಿಯಾಗಬೇಕಾಗಿಲ್ಲ” ಎಂದು ಅವರು ತಿಳಿಸಿದರು.



