August 20, 2026
Thursday, August 20, 2026
spot_img

ಹಿಂದುಳಿದ ವರ್ಗಗಳ ಆಶಾಕಿರಣ ಡಿ. ದೇವರಾಜ ಅರಸು ಜನ್ಮದಿನಾಚರಣೆ: ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಗೌರವ ನಮನ

ಹೊಸದಿಗಂತ ವರದಿ ಬೆಳಗಾವಿ:

ದಿವಂಗತ ಡಿ. ದೇವರಾಜ ಅರಸು ಅವರು ಅಧಿಕಾರವನ್ನು ಕೇವಲ ಆಡಳಿತಕ್ಕೆ ಸೀಮಿತಗೊಳಿಸದೆ, ಸಮಾಜದ ಸುಧಾರಣೆಗೆ ಶ್ರಮಿಸಿದ ಬಡವರ ಬಂಧು ಹಾಗೂ ಜನಪರ ನಾಯಕರಾಗಿದ್ದರು ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಗುರುವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅರಸು ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಶ್ರೇಷ್ಠ ನಾಯಕರಾಗಿದ್ದು, ‘ಉಳುವವನೇ ಭೂಮಿಯ ಒಡೆಯ’ ಎಂಬ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸುವ ಮೂಲಕ ಸಾಮಾಜಿಕ ಸಮಾನತೆಗೆ ಭದ್ರ ಬುನಾದಿ ಹಾಕಿದರು. ಭೂ ಸುಧಾರಣೆಯಡಿ ಭೂಮಿಯನ್ನು ಬಡ ರೈತರಿಗೆ ಹಂಚಿಕೆ ಮಾಡಿರುವುದು ಐತಿಹಾಸಿಕ ಸಾಧನೆಯಾಗಿದೆ ಎಂದರು.

ಉಪನ್ಯಾಸಕರಾಗಿ ಮಾತನಾಡಿದ ಡಾ. ಪ್ರವೀಣಾ ಕೆ.ಎಸ್, ಡಿ. ದೇವರಾಜ ಅರಸು ಅವರು ತುಳಿತಕ್ಕೊಳಗಾದ ಸಮುದಾಯಗಳ ಧ್ವನಿಯಾಗಿ ಅನೇಕ ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದರು. 1972ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತಂದರು. 1973ರಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ್ದು ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ ಎಂದರು.

ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು 1972ರಲ್ಲಿ ಎಲ್.ಜಿ. ಹಾವನೂರು ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ವೈಜ್ಞಾನಿಕ ನೆಲೆ ಕಲ್ಪಿಸಿದರು. ಜೀತ ಪದ್ಧತಿಯಿಂದ ಸಾವಿರಾರು ಜನರನ್ನು ಮುಕ್ತಗೊಳಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಕೊಡುಗೆ ನೀಡಿದರು ಎಂದು ವಿವರಿಸಿದರು.

ಇದನ್ನೂ ಓದಿ:

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಚನ್ನಮ್ಮ ವೃತ್ತ, ಕೃಷ್ಣದೇವರಾಯ ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರ ತಲುಪಿತು. ಭುಜಂಗ ಕಲಾ ಯಕ್ಷಗಾನ ತಂಡ, ಬೀರಸಿದ್ದೇಶ್ವರ ಡೊಳ್ಳು ಕುಣಿತ ಹಾಗೂ ವಿವಿಧ ವೇಷಧಾರಿ ಕಲಾವಿದರ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರು, ಗಣ್ಯರು, ವಸತಿ ನಿಲಯಗಳ ನಿಲಯ ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !