ಹೊಸದಿಗಂತ ವರದಿ ಚಿತ್ರದುರ್ಗ:
ದಲಿತರು, ಶೋಷಿತರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರದಿಂದ ಎಸ್.ಟಿ. ಹಾಗೂ ದಲಿತ ಸಮುದಾಯಗಳಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಬಿಜೆಪಿ ಎಸ್.ಟಿ. ಜಿಲ್ಲಾ ಮೋರ್ಚಾ ಜಿಲ್ಲಾಧ್ಯಕ್ಷ ರಾಜು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿರುವ ನಾಲ್ಕನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ ಸುಮಾರು 187 ಕೋಟಿ ರೂಪಾಯಿ ನಿಧಿಯನ್ನು ಅಕ್ರಮವಾಗಿ ವರ್ಗಾಯಿಸಿ, ಕಳ್ಳತನ ಮಾಡಲಾಗಿದೆ. ಈ ಹಣವನ್ನು ಆಂಧ್ರಪ್ರದೇಶದ ಚುನಾವಣೆ, ಲೋಕಸಭಾ ಚುನಾವಣೆ ಹಾಗೂ ಹೈಕಮಾಂಡ್‌ಗೆ ನೀಡಲು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದೂರಿದರು.
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಎಸ್‌ಟಿ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿಯನ್ನು ಶೇ.3 ರಿಂದ ಶೇ.7 ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಅದನ್ನು ಮತ್ತೆ ಶೇ.3 ಕ್ಕೆ ಇಳಿಸಿ ಜನಾಂಗಕ್ಕೆ ಮಹಾ ಅನ್ಯಾಯ ಎಸಗಿದೆ. ಇದರಿಂದಾಗಿ ನೀಟ್ ಮತ್ತು ಸಿಇಟಿ ಪರೀಕ್ಷೆಗಳಲ್ಲಿ ಎಸ್‌ಟಿ ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ಸಾವಿರಾರು ವೈದ್ಯಕೀಯ ಹಾಗೂ ತಾಂತ್ರಿಕ ಸೀಟುಗಳು ಕೈತಪ್ಪಿ ಹೋಗಿವೆ. ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲೂ ದೊಡ್ಡ ಮಟ್ಟದ ಹಿನ್ನಡೆಯಾಗಿದೆ ಎಂದರು.
ಸಿದ್ದರಾಮಯ್ಯನವರು ತಮ್ಮ ಹಿಂದಿನ ಹಾಗೂ ಪ್ರಸ್ತುತ ಆಡಳಿತಾವಧಿಯಲ್ಲಿ ನಾಯಕ ಮತ್ತು ದಲಿತ ಜನಾಂಗವನ್ನು ನಿರಂತರವಾಗಿ ತುಳಿಯುವ ಕೆಲಸ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಹಾಗೂ ಡಾ. ಹೆಚ್.ಸಿ. ಮಹದೇವಪ್ಪ ಅವರಂತಹ ದಲಿತ ನಾಯಕರು ಸಮುದಾಯಕ್ಕೆ ಯಾವುದೇ ಕೊಡುಗೆ ನೀಡದೆ, ಜನಾಂಗದ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಎಸ್‌ಟಿ ಸಮುದಾಯದ ಏಳಿಗೆಗಾಗಿ ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ಬೃಹತ್ ಮೊತ್ತದ ಹಣವನ್ನು ನೇರವಾಗಿ ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ. ಗಂಗಾ ಕಲ್ಯಾಣ, ಶೈಕ್ಷಣಿಕ ಸಾಲ ಹಾಗೂ ವಿದ್ಯಾರ್ಥಿ ವೇತನದಂತಹ ಮಹತ್ವದ ಯೋಜನೆಗಳಿಗೆ ತಲುಪಬೇಕಿದ್ದ ಹಣವು ದುರುಪಯೋಗಗೊಂಡಿದ್ದು, ಸಚಿವ ನಾಗೇಂದ್ರ ಅವರು ಇದಕ್ಕೆ ನೇರ ಹೊಣೆ ಇಂತಹ ಖಜಾನೆ ಲೂಟಿ ಇತಿಹಾಸದಲ್ಲೇ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಸುಮಾರು 4.38 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಮುಂದಾಗಿರುವುದು ಬಡವರಿಗೆ ಮಾಡುತ್ತಿರುವ ವಂಚನೆ. ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಹೆಸರಿನಲ್ಲಿ ಪರಿಶೀಲನೆ ನೆಪವೊಡ್ಡಿ ಬಡವರ ಸೌಲಭ್ಯಗಳನ್ನು ಕಡಿತಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆಪಾದಿಸಿದರು.
ಇದೇ ಸಮಯದಲ್ಲಿ ಪ್ರಖ್ಯಾತ್ ಜೋಗಿ ಮದಕರಿ ನಾಯಕ ಹಾಗೂ ಚಿಂತನ್ ವಿ. ಕಿತ್ತೂರು ರಾಣಿ ಚನ್ನಮ್ಮ ವೇಷದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷ ಪರಶುರಾಮ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಭರಮಸಾಗರ ಮಂಡಲದ ಎಸ್.ಟಿ. ಮೋರ್ಚಾದ ಅಧ್ಯಕ್ಷ ನವೀನ್ ಕುಮಾರ್, ಎಸ್.ಟಿ. ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಪಂಡು, ಹಿರಿಯೂರು ಎಸ್.ಟಿ. ಮೋರ್ಚಾದ ಅಧ್ಯಕ್ಷ ಪ್ರರ್ಜಿವ್, ರೈತ ಮೋರ್ಚಾ ನಗರಾಧ್ಯಕ್ಷ ಲಕ್ಷ್ಮೀನರಸಿಂಹಸ್ವಾಮಿ, ನಗರಸಭೆ ಮಾಜಿ ಸದಸ್ಯರಾದ ನಾಗರಾಜ್, ಮುಖಂಡರಾದ ತಿಪ್ಪೇಸ್ವಾಮಿ, ಮಹಮ್ಮದ್ ದಸ್ತಗೀರ್, ಪ್ರಕಾಶ್, ನರಸಿಂಹಮೂರ್ತಿ, ಪ್ರಶಾಂತ್ ಭಾಗವಹಿಸಿದ್ದರು.



