August 20, 2026
Thursday, August 20, 2026
spot_img

ಕೋಟೆನಾಡಿನಲ್ಲಿ ವಿಘ್ನನಿವಾರಕನ ಭವ್ಯ ಸ್ವಾಗತಕ್ಕೆ ಸಿದ್ಧತೆ: ಅ. 3 ರಂದು ಹಿಂದೂ ಮಹಾಗಣಪತಿಯ ಶೋಭಾಯಾತ್ರೆ

ಹೊಸದಿಗಂತ ವರದಿ ಚಿತ್ರದುರ್ಗ:

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಆಚರಿಸಲಾಗುವ  ‘ಹಿಂದೂ ಮಹಾಗಣಪತಿ ಮಹೋತ್ಸವʼದ ಅಂಗವಾಗಿ ಸೆಪ್ಟೆಂಬರ್ 14 ರಂದು ಗಣೇಶಮೂರ್ತಿ ಪ್ರತಿಷ್ಠಾಪನೆ ಹಾಗೂ ಅಕ್ಟೋಬರ್ 3 ರಂದು ವೈಭವದ ಶೋಭಾಯಾತ್ರೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದರು.

ನಗರದ ವಿ.ಪಿ.ಬಡಾವಣೆಯಲ್ಲಿನ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ 2026ರ ಹಿಂದೂ ಮಹಾ ಗಣಪತಿ ಮಹೋತ್ಸವ ಬಗ್ಗೆ ಮಾಹಿತಿಯನ್ನು ನೀಡಿದ ಅವರು ಕಳೆದ 28 ವರ್ಷಗಳಿಂದ ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಹಿಂದೂ ಮಹಾ ಗಣಪತಿ ಸ್ಥಾಪನೆ ಮಾಡಿ ಪೂಜೆ ಹಾಗೂ ಶೋಭಾಯಾತ್ರೆ ನಡೆಸಲಾಗುತ್ತಿದೆ. ಪ್ರತಿ ವರ್ಷ ಇದಕ್ಕಾಗಿ ಸಮಿತಿ ರಚನೆ ಮಾಡಲಾಗುತ್ತದೆ. ಅಲ್ಲದೇ ಮಹೋತ್ಸವ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ ಎಂದರು.

ಪ್ರತಿ ವರ್ಷ ಜೈನ್ ಮೈದಾನದಲ್ಲಿ ಆಯೋಜಿಸಲಾಗುತ್ತಿದ್ದ ಈ ಕಾರ್ಯಕ್ರಮವನ್ನು, ಈ ಬಾರಿ ಅದರ ಮುಂದುಗಡೆ ಇರುವ ಶ್ರೀ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ (ಸರ್ಕಾರಿ ವಿಜ್ಞಾನ ಕಾಲೇಜು ಹತ್ತಿರ) ನಡೆಸಲು ನಿರ್ಧರಿಸಲಾಗಿದೆ. ಜೈನ್ ಮೈದಾನದಲ್ಲಿ ಗೋವುಗಳು ಹಾಗೂ ಬೀದಿ ನಾಯಿಗಳ ಚಿಕಿತ್ಸೆಗೆ ಸಂಬಂಧಿಸಿದ ಫೌಂಡೇಶನ್ ಜಾಗ ಪಡೆದಿರುವುದರಿಂದ ಜಾಗದ ಅಭಾವ ಉಂಟಾಗಬಹುದೆಂಬ ಕಾರಣಕ್ಕೆ ಈ ಬದಲಾವಣೆ ಮಾಡಲಾಗಿದೆ. ಈಗಾಗಲೇ ಸಂಬಂಧಪಟ್ಟವರಿಂದ ಅನುಮತಿ ಪಡೆಯಲಾಗಿದೆ ಎಂದು ಹೇಳಿದರು.

ಈ ಬಾರಿಯ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸುಧೀರ್ ಜಿ. ಕುಂದಾರ್ಪಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಚನ್ನಕೇಶವ್, ಗೌರವಾಧ್ಯಕ್ಷರಾಗಿ ಷಡಕ್ಷರಪ್ಪ ಹಾಗೂ ಇತರ ಪದಾಧಿಕಾರಿಗಳನ್ನು ಸಮಿತಿಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಚೆನ್ನಕೇಶವ ಮಾತನಾಡಿ, ಆಗಸ್ಟ್ 26ರ ಬುಧವಾರ ಬೆಳಿಗ್ಗೆ 9:45 ರಿಂದ 10:30 ರೊಳಗೆ ಗೋಪೂಜೆ ಹಾಗೂ ಧ್ವಜಪೂಜೆ ನೆರವೇರಲಿದೆ. ಸೆಪ್ಟೆಂಬರ್ 9 ಅಥವಾ 13 ರಂದು ಸಮಯ ಮತ್ತು ನಕ್ಷತ್ರವನ್ನು ಆಧರಿಸಿ ಹಿಂದೂ ಮಹಾ ಗಣಪತಿಯ ಪುರಪ್ರವೇಶ ಕಾರ್ಯಕ್ರಮ ಅಂತಿಮಗೊಳಿಸಲಾಗುವುದು. ಸೆಪ್ಟೆಂಬರ್ 14 ರಂದು ಬೆಳಿಗ್ಗೆ 9:18 ರಿಂದ 10:45 ಶುಭ ಮುಹೂರ್ತದಲ್ಲಿ ಗಣೇಶಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ. ಅಕ್ಟೋಬರ್ 3 ರಂದು ಶೋಭಾಯಾತ್ರೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಇದನ್ನೂ ಓದಿ:

ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸತ್ಸಂಗ ಪ್ರಮುಖ್ ಚಂದ್ರಶೇಖರ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಕೇಂದ್ರಸ್ಥಾನ ಮಾತ್ರವಲ್ಲದೆ ಚಳ್ಳಕೆರೆ, ಹೊಳಲ್ಕೆರೆ, ಹಿರಿಯೂರು ಹಾಗೂ ಹೊಸದುರ್ಗ ಭರಮಸಾಗರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲೂ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಹಯೋಗದಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ನಡೆಯಲಿದೆ. ಈ ತಾಲೂಕುಗಳ ಶೋಭಾಯಾತ್ರೆಗಳು ಚಿತ್ರದುರ್ಗದ ಮುಖ್ಯ ಶೋಭಾಯಾತ್ರೆಗಿಂತ ಮುಂಚಿತವಾಗಿಯೇ ಮುಕ್ತಾಯಗೊಳ್ಳಲಿವೆ. ದೇಶದ ಎರಡನೇ ಅತಿ ದೊಡ್ಡ ಹಿಂದೂ ಮಹಾ ಗಣಪತಿ ಉತ್ಸವ ಎಂದೇ ಹೆಸರಾಗಿರುವ ಈ ಕಾರ್ಯಕ್ರಮವನ್ನು ಕಳೆದ 19 ವರ್ಷಗಳಿಂದ ಅತ್ಯಂತ ವೈಭವದಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. 

ಸುದ್ದಿಗೋಷ್ಟಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಡಾ. ಮಂಜುನಾಥ್, ಜಿಲ್ಲಾಧ್ಯಕ್ಷ ಷಡಕ್ಷರಪ್ಪ, ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯ ನೂತನ ಅಧ್ಯಕ್ಷ ಸುಧೀರ್ ಜಿ. ಕುಂದಾರ್ಪಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !