ಮಳೆಗಾಲದಲ್ಲಿ ಟ್ರೆಕ್ಕಿಂಗ್ ಅಥವಾ ಕಾಡಿನ ದಾರಿಯಲ್ಲಿ ಹೋಗುವಾಗ ಜಿಗಣೆಗಳು ಕಚ್ಚುವುದು ಸಾಮಾನ್ಯ. ಜಿಗಣೆ ದೇಹಕ್ಕೆ ಅಂಟಿಕೊಂಡಿದೆ ಅನ್ನೋದು ಗೊತ್ತಾಗುವಷ್ಟರಲ್ಲಿ ಅದು ರಕ್ತ ಹೀರಲು ಶುರು ಮಾಡಿಬಿಟ್ಟಿರುತ್ತೆ. ಆದರೆ ಒಂದು ಪ್ರಶ್ನೆ ನಿಮಗೆ ಯಾವತ್ತಾದ್ರೂ ಬಂದಿದ್ಯಾ? ಜಿಗಣೆ ಕಚ್ಚುವಾಗ ನಮಗೆ ನೋವೇ ಆಗೋದಿಲ್ಲ ಯಾಕೆ?
ಜಿಗಣೆ ಕಚ್ಚೋದು ಹೇಗೆ?
ಜಿಗಣೆ ತನ್ನ ಬಾಯಿಯಲ್ಲಿರುವ ಸಣ್ಣ, ತೀಕ್ಷ್ಣವಾದ ರಚನೆಗಳ ಸಹಾಯದಿಂದ ಚರ್ಮವನ್ನು ಸೀಳಿ ರಕ್ತ ಹೀರಿಕೊಳ್ಳುತ್ತದೆ. ಆದರೆ ಈ ಪ್ರಕ್ರಿಯೆ ನಡೆಯುವಾಗ ಅದರ ಲಾಲಾರಸ ಪ್ರಮುಖ ಪಾತ್ರ ವಹಿಸುತ್ತದೆ.
ಕಚ್ಚುವಾಗ ನೋವಾಗದೆ ಇರೋದಕ್ಕೆ ಇದೇ ಕಾರಣ ನೋಡಿ!
ಜಿಗಣೆ ತನ್ನ ಲಾಲಾರಸದಲ್ಲಿ ಕೆಲವು ವಿಶೇಷ ರಾಸಾಯನಿಕಗಳನ್ನು ಹೊಂದಿರುತ್ತದೆ. ಇವು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತವೆ. ಜೊತೆಗೆ, ಕಚ್ಚಿದ ಸ್ಥಳದಲ್ಲಿ ನೋವಿನ ಅನುಭವ ಕಡಿಮೆಯಾಗುವಂತೆ ಮಾಡುವ ಗುಣವೂ ಇರುವುದರಿಂದ, ಜಿಗಣೆ ಕಚ್ಚಿದ ಕ್ಷಣ ನಮಗೆ ಹೆಚ್ಚಿನ ನೋವು ಗೊತ್ತಾಗುವುದಿಲ್ಲ.
ಇದನ್ನೂ ಓದಿ:
ಅದಕ್ಕೇ ಜಿಗಣೆ ದೇಹಕ್ಕೆ ಅಂಟಿಕೊಂಡಿದ್ದರೂ, ಅದು ರಕ್ತ ಹೀರಿದ ನಂತರವೇ ನಮಗೆ ವಿಷಯ ಗೊತ್ತಾಗುವ ಸಂದರ್ಭಗಳು ಹೆಚ್ಚು!
ರಕ್ತ ಹೀರುವ ಜಿಗಣೆ ತಂತ್ರ
ಜಿಗಣೆಗೆ ರಕ್ತ ಸರಾಗವಾಗಿ ಸಿಗಬೇಕು. ಹೀಗಾಗಿ ಅದರ ಲಾಲಾರಸದಲ್ಲಿರುವ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಅಂಶಗಳು ಕಚ್ಚಿದ ಜಾಗದಲ್ಲಿ ರಕ್ತ ಹರಿಯುವಂತೆ ಮಾಡುತ್ತವೆ. ಜಿಗಣೆ ಬಿಟ್ಟ ನಂತರವೂ ಕೆಲಕಾಲ ಆ ಜಾಗದಿಂದ ರಕ್ತ ಬರುತ್ತದೆ.
ಜಿಗಣೆ ಕಚ್ಚಿದ ನಂತರ ಕೆಲವರಿಗೆ ಕೆಂಪಾಗುವುದು, ತುರಿಕೆ ಅಥವಾ ಸಣ್ಣ ಊತ ಕಾಣಿಸಿಕೊಳ್ಳಬಹುದು. ಇದು ದೇಹದ ಸಹಜ ಪ್ರತಿಕ್ರಿಯೆಯಾಗಿರಬಹುದು. ಜಿಗಣೆ ಬಿಟ್ಟ ನಂತರವೂ ಗಾಯವನ್ನು ಕೆರೆದುಕೊಳ್ಳದೆ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.



