ಮನೆಯಲ್ಲಿ ಬ್ರೆಡ್ ಇದೆಯೇ? ಹಾಗಿದ್ದರೆ ಬ್ರೆಡ್ನಿಂದ ಯಾವಾಗಲೂ ಮಾಡುವ ಟೋಸ್ಟ್ ಅಥವಾ ಸ್ಯಾಂಡ್ವಿಚ್ ಬಿಟ್ಟು, ಈ ಬಾರಿ ಒಂದು ಸುಲಭವಾದ ಸಿಹಿ ತಿಂಡಿ ಟ್ರೈ ಮಾಡಿ. ಕೇವಲ 10 ನಿಮಿಷಗಳಲ್ಲಿ ಈ ‘ಸ್ಪೆಷಲ್ ಬ್ರೆಡ್ ಹಲ್ವಾ’ವನ್ನು ಮಾಡಬಹುದು.
ಬೇಕಾಗುವ ಸಾಮಗ್ರಿಗಳು
ಬ್ರೆಡ್ ಸ್ಲೈಸ್
ಸಕ್ಕರೆ
ಹಾಲು
ತುಪ್ಪ
ಗೋಡಂಬಿ ಮತ್ತು ಒಣದ್ರಾಕ್ಷಿ
ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲು ಬ್ರೆಡ್ ಸ್ಲೈಸ್ಗಳ ನಾಲ್ಕೂ ಕಡೆಯ ಬ್ರೌನ್ ಅಂಚುಗಳನ್ನು ಕತ್ತರಿಸಿ ಉಳಿದ ಬಿಳಿ ಭಾಗವನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದುಕೊಂಡು. ಅದೇ ಬಾಣಲೆಗೆ ಇನ್ನುಳಿದ ತುಪ್ಪವನ್ನು ಹಾಕಿ ಬಿಸಿ ಮಾಡಿ. ಕತ್ತರಿಸಿದ ಬ್ರೆಡ್ ಚೂರುಗಳನ್ನು ಹಾಕಿ ಅದು ಗಾಢ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಬೇಕು.
ಬ್ರೆಡ್ ಕಂದು ಬಣ್ಣಕ್ಕೆ ಬಂದ ನಂತರ, ಅದಕ್ಕೆ1 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬ್ರೆಡ್ ಹಾಲನ್ನು ಸಂಪೂರ್ಣವಾಗಿ ಹೀರಿಕೊಂಡು ಮೃದುವಾಗಿ ಮುದ್ದೆಯಾಗುವವರೆಗೆ ಬೇಯಿಸಿ. ಈಗ ಅದಕ್ಕೆ ಅರ್ಧ ಕಪ್ ಸಕ್ಕರೆ ಸೇರಿಸಿ ಆ ಮಿಶ್ರಣವು ಗಟ್ಟಿಯಾಗಿ, ಪಾತ್ರೆಯ ಪಕ್ಕದಲ್ಲಿ ತುಪ್ಪ ಬಿಟ್ಟುಕೊಳ್ಳಲು ಪ್ರಾರಂಭಿಸುವವರೆಗೆ ಚೆನ್ನಾಗಿ ಕೈಯಾಡಿಸುತ್ತಿರಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ಹುರಿದಿಟ್ಟುಕೊಂಡ ಗೋಡಂಬಿ-ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿದರೆ ಬ್ರೆಡ್ ಹಲ್ವಾ ಸಿದ್ಧ.



