August 21, 2026
Friday, August 21, 2026
spot_img

ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ದಾವಣಗೆರೆಯಲ್ಲಿ ಬಿಜೆಪಿ ಧರಣಿ; ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಹೊಸದಿಗಂತ ವರದಿ ದಾವಣಗೆರೆ:

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ಆರೋಪಿ ಬಿ.ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ನಿರಂತರ ಧರಣಿ ಸತ್ಯಾಗ್ರಹದ ವೇಳೆ ರಸ್ತೆ ತಡೆ ನಡೆಸುತ್ತಿದ್ದ ಪಕ್ಷದ 50ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದರು.

ನಗರದ ಹಳೆ ಪಿ.ಬಿ ರಸ್ತೆಗೆ ಹೊಂದಿಕೊಂಡಿರುವ ಉಪ ವಿಭಾಗಾಧಿಕಾರಿ ಕಚೇರಿ ಎದುರು ಕಳೆದ ಐದು ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಜಗಳೂರು ಮಾಜಿ ಶಾಸಕ ಹೆಚ್.ಪಿ.ರಾಜೇಶ ಮತ್ತಿತರರು ದಿಢೀರನೇ ರಸ್ತೆ ತಡೆ ಮಾಡಲು ಮುಂದಾಗಿದ್ದರು. ಧರಣಿ ಸ್ಥಳದಲ್ಲಿದ್ದ ಮುಖಂಡರು, ಕಾರ್ಯಕರ್ತರು ಏಕಾಏಕಿ ಹಳೆ ಪಿ.ಬಿ ರಸ್ತೆಯ ಎರಡೂ ಬದಿಗೆ ಅಡ್ಡಲಾಗಿ ಕುಳಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಜತೆಗೆ ಸಚಿವ ಬಿ.ನಾಗೇಂದ್ರರನ್ನು ಸಂಪುಟದಿಂದ ವಜಾಗೊಳಿಸುವಂತೆ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ:

ಮುಂಜಾಗ್ರತಾ ಕ್ರಮವಾಗಿ ಎಂ.ಪಿ.ರೇಣುಕಾಚಾರ್ಯ, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಹೆಚ್.ಪಿ.ರಾಜೇಶ, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಎನ್.ರಾಜಶೇಖರ, ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಎಸ್.ಜಗದೀಶ, ಚಂದ್ರಶೇಖರ ಪೂಜಾರ, ಕೆ.ಎಂ.ಸುರೇಶ, ಆರ್.ಎಲ್.ಶಿವಪ್ರಕಾಶ, ಶಂಕರಗೌಡ ಬಿರಾದಾರ, ಬಿ.ಆನಂದ, ಪಂಜು ಪೈಲ್ವಾನ್, ಸಂತೋಷ ಪೈಲ್ವಾನ್, ಕಾಯಿಪೇಟೆ ಮಂಜುನಾಥ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು, ಡಿಎಆರ್ ಕವಾಯಿತು ಮೈದಾನಕ್ಕೆ ಕರೆದೊಯ್ದು, ಸುಮಾರು ಗಂಟೆಗಳ ನಂತರ ಬಿಡುಗಡೆ ಮಾಡಿದರು. ಪಕ್ಷದ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಶುಕ್ರವಾರಕ್ಕೆ ಬಿಜೆಪಿ ತನ್ನ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !