August 21, 2026
Friday, August 21, 2026
spot_img

‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ: ಯಾರ ಮುಡಿಗೆ ಚಾಂಪಿಯನ್ ಕಿರೀಟ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕದ ಮನೆಮನಗಳ ಮೆಚ್ಚಿನ ಸಂಗೀತ ರಿಯಾಲಿಟಿ ಶೋ ಜೀ ಕನ್ನಡದ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಇದೀಗ ಅಂತಿಮ ಘಟ್ಟ ತಲುಪಿದೆ. ಕಳೆದ ಕೆಲವು ತಿಂಗಳುಗಳಿಂದ ಕೋಟ್ಯಂತರ ಸಂಗೀತ ಪ್ರಿಯರನ್ನು ತನ್ನ ರಾಗಮಾಧುರ್ಯದಿಂದ ರಂಜಿಸುತ್ತಿರುವ ಈ ಜನಪ್ರಿಯ ಶೋನ ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಆಗಸ್ಟ್ 22 ಮತ್ತು 23 ರಂದು ಸಂಜೆ 7 ಗಂಟೆಗೆ ಎರಡು ದಿನಗಳ ಕಾಲ ಈ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಆರು ಅಂತಿಮ ಸ್ಪರ್ಧಿಗಳ ನಡುವೆ ಬಿಗ್ ಫೈಟ್

ಬಹು ನಿರೀಕ್ಷಿತ ಗ್ರ್ಯಾಂಡ್ ಫಿನಾಲೆಗೆ ಅದ್ಧೂರಿ ವೇದಿಕೆ ಸಜ್ಜಾಗಿದ್ದು, ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಅಶ್ಮಿತ್, ಅಚಿಂತ್ಯ, ಮಹನ್ಯಾ, ಹರುಷ್, ಜಯಲಕ್ಷ್ಮಿ ಮತ್ತು ಅವ್ಯುಕ್ತ್ ಅವರು ಚಾಂಪಿಯನ್ ಪಟ್ಟಕ್ಕಾಗಿ ಮುಖಾಮುಖಿಯಾಗಲಿದ್ದಾರೆ. ಇಡೀ ಸೀಸನ್‌ನಾದ್ಯಂತ ತಮ್ಮ ಅದ್ಭುತ ಗಾಯನದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಈ ಆರು ಪುಟ್ಟ ಪ್ರತಿಭೆಗಳು, ಫಿನಾಲೆಯ ವೇದಿಕೆಯ ಮೇಲೂ ಮತ್ತೊಮ್ಮೆ ವಿಶೇಷ ಪ್ರದರ್ಶನಗಳ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ.

ಖ್ಯಾತ ಗಾಯಕರ ಮಾರ್ಗದರ್ಶನ

ಕರ್ನಾಟಕದ ಮೂಲೆ ಮೂಲೆಗಳಿಂದ ಬಂದಿದ್ದ ನೂರಾರು ಪುಟ್ಟ ಪ್ರತಿಭೆಗಳ ಪೈಕಿ ಈ ಆರು ಸ್ಪರ್ಧಿಗಳು ತಮ್ಮ ಅದ್ಭುತ ಧ್ವನಿ, ಮುಗ್ಧತೆ, ಆತ್ಮವಿಶ್ವಾಸ ಹಾಗೂ ಸಂಗೀತದ ಮೇಲಿನ ಅಪಾರ ಆಸಕ್ತಿಯಿಂದ ಫಿನಾಲೆ ತಲುಪಿದ್ದಾರೆ. ಈ ಸುಂದರ ಪಯಣದಲ್ಲಿ ಪುಟ್ಟ ಗಾಯಕರಿಗೆ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಹೆಮ್ಮೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.

ವಿಶೇಷ ಸರ್‌ಪ್ರೈಸ್‌ಗಳ ಮಹಾಪೂರ

ಅದ್ಧೂರಿ ಪ್ರದರ್ಶನಗಳು, ಭಾವನಾತ್ಮಕ ಕ್ಷಣಗಳು ಮತ್ತು ವಿಶೇಷ ಸರ್‌ಪ್ರೈಸ್‌ಗಳಿಂದ ಕೂಡಿರುವ ಈ ಗ್ರ್ಯಾಂಡ್ ಫಿನಾಲೆ, ಸ್ಪರ್ಧಿಗಳ ಸುದೀರ್ಘ ಪಯಣಕ್ಕೆ ಒಂದು ಅದ್ಧೂರಿ ಹಾಗೂ ಮರೆಯಲಾಗದ ಅಂತ್ಯವನ್ನು ನೀಡಲಿದೆ. ಈ ಆರು ಮಹಾನ್ ಪ್ರತಿಭೆಗಳಲ್ಲಿ ಅಂತಿಮವಾಗಿ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಕಿರೀಟವನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಈ ವಾರಾಂತ್ಯದಲ್ಲಿ ತೆರೆ ಬೀಳಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !