ಮಳೆಗಾಲದ ದಿನಗಳಲ್ಲಿ ಮಲೆನಾಡಿನ ಮನೆಗಳಲ್ಲಿ ತಪ್ಪದೇ ಮಾಡುವ ಒಂದು ತಿಂಡಿ ಎಂದರೆ ಈ ಕೆಸುವಿನ ಎಲೆಯ ಪತ್ರೊಡೆ. ಇದು ಮಲೆನಾಡಿನ ಜನಪ್ರಿಯ ಖಾದ್ಯವಾಗಿದೆ. ಕೆಲವರು ಇದನ್ನು ಮಾಡುವುದು ತುಂಬ ಕಷ್ಟ ಎಂದುಕೊಳ್ಳುತ್ತಾರೆ. ಅಂಥವರಿಗಾಗಿ ಈ ಸೀಕ್ರೆಟ್ ರೆಸಿಪಿ.
ಬೇಕಾಗುವ ಸಾಮಗ್ರಿಗಳು
ಕೆಸುವಿನ ಎಲೆಗಳು
ಅಕ್ಕಿ
ಒಣ ಮೆಣಸಿನಕಾಯಿ
ಧನಿಯಾ
ಜೀರಿಗೆ
ಹುಣಸೆಹಣ್ಣು
ಬೆಲ್ಲದ ಪುಡಿ
ಕಾಯಿ ತುರಿ
ಉಪ್ಪು
ತೆಂಗಿನ ಎಣ್ಣೆ
ಮಾಡುವ ವಿಧಾನ
ಮೊದಲುನೆನೆಸಿದ ಅಕ್ಕಿ, ಒಣ ಮೆಣಸು, ಧನಿಯಾ, ಜೀರಿಗೆ, ಹುಣಸೆಹಣ್ಣು, ಬೆಲ್ಲ, ಕಾಯಿ ತುರಿ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ಇಡ್ಲಿ ಹಿಟ್ಟಿಗಿಂತ ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಕೆಸುವಿನ ಎಲೆಯ ಹಿಂಭಾಗದ ದಪ್ಪ ದಂಟನ್ನು ತೆಗೆದು ಅದರ ಮೇಲೆ ರುಬ್ಬಿದ ಮಸಾಲೆಯನ್ನು ತೆಳ್ಳಗೆ ಸವರಿ, ಅದರ ಮೇಲೆ ಮತ್ತೊಂದು ಎಲೆ ಇಟ್ಟು ಮಸಾಲೆ ಸವರಿ. ಹೀಗೆ 4-5 ಎಲೆಗಳನ್ನು ಒಂದರ ಮೇಲೊಂದು ಇಟ್ಟು ಮಸಾಲೆ ಹಚ್ಚಬೇಕು. ನಂತರ ಎಲೆಗಳ ಎರಡೂ ಬದಿಗಳನ್ನು ಮಡಚಿ, ರೋಲ್ ಮಾಡಿ ಗಟ್ಟಿಯಾಗಿ ಸುತ್ತಿಕೊಂಡು, ಇಡ್ಲಿ ಪಾತ್ರೆಯಲ್ಲಿ ಇಟ್ಟು 40 ರಿಂದ 45 ನಿಮಿಷ ಹಬೆಯಲ್ಲಿ ಚೆನ್ನಾಗಿ ಬೇಯಿಸಿಬೇಕು. ಬೆಂದ ನಂತರ ಸಣ್ಣ ಚೂರುಗಳಾಗಿ ಕತ್ತರಿಸಿ, ಮೇಲಿಂದ ಹಸಿ ತೆಂಗಿನ ಎಣ್ಣೆ ಅಥವಾ ತುಪ್ಪ ಹಾಕಿ ತಿನ್ನಬಹುದು ಅಥವಾ ಇದು ಬೆಂದ ನಂತರ ಸಣ್ಣದಾಗಿ ಹೆಚ್ಚಿ, ಒಗ್ಗರಣ್ಣೆ ಮಾಡಿ ಕೂಡ ಸವಿಯಬಹುದು.



