ಎಲ್ಲಿಗೆ ಹೋಗುತ್ತಿದ್ದೀಯಾ? ಯಾರ ಜೊತೆ ಹೋಗುತ್ತಿದ್ದೀಯಾ? ಇಷ್ಟೊತ್ತು ಯಾಕ್ ಹೊರಗಿದ್ದೆ? ಮನೆ ಮಕ್ಕಳಿಗಿಂತ ಕೆಲಸಾನೇ ಮುಖ್ಯ ಆಯ್ತಾ ನಿನಗೆ? ಮದುವೆ ಯಾವಾಗ? ಮದುವೆ ಆದ್ಮೇಲೆ ಕೆಲಸ ಮಾಡೋದು ಯಾಕೆ? ಒಂದಾ, ಎರಡ ಪ್ರಶ್ನೆಗಳ ಸರಮಾಲೆನೇ ಶುರುವಾಗಿ ಬಿಡುತ್ತೆ. ಆಕೆ ತನ್ನ ಜೀವನವನ್ನು ತನ್ನಿಷ್ಟದಂತೆ ರೂಪಿಸಿಕೊಳ್ಳೋಕೆ ಪ್ರಯತ್ನ ಪಟ್ಟಾಗ ಈ ಎಲ್ಲಾ ಮಾತುಗಳನ್ನ ಕೇಳ್ಬೇಕಾಗುತ್ತೆ.
ಅದೇ ಒಂದು ವೇಳೆ ತನ್ನಿಷ್ಟದ ಜೀವನವನ್ನು ರೂಪಿಸಿಕೊಳ್ಳೋಕೆ ಪುರುಷರು ನಿರ್ಧಾರ ತೆಗೆದುಕೊಂಡ್ರೆ ಅದನ್ನ ಸ್ವಾತಂತ್ರ್ಯ ಗೌರವ ಅಂತ ಕರೆಯೋ ಸಮಾಜ ಅದೇ ನಿರ್ಧಾರವನ್ನ ಮಹಿಳೆ ತೆಗೆದುಕೊಂಡಾಗ ಮಾತ್ರ ಹಟ ಅಹಂಕಾರ ಅಥವಾ ತಪ್ಪು ಅಂತ ನೋಡೋದ್ಯಾಕೆ? ನಿಮ್ಮಲ್ಲಿ ಇದಕ್ಕೆ ಉತ್ತರ ಇದ್ಯಾ?

ಮಹಿಳೆಯ ಸ್ವತಂತ್ರ್ಯಅಂದ್ರೆ ಕುಟುಂಬವನ್ನ ತಿರಸ್ಕರಿಸಿದ್ದಾಳೆ ಅಂತಾನಾ?
ಮಹಿಳೆ ಸ್ವತಂತ್ರ್ಯವಾಗಿ ಬದುಕಬೇಕು ತನ್ನ ಕಾಲ ಮೇಲೆ ತಾನು ನಿಂತು ತನ್ನ ಬದುಕನ್ನ ಕಟ್ಟಿಕೊಳ್ಳಬೇಕು ಅಂದ್ರೆ ಆಕೆ ತನ್ನ ಕುಟುಂಬವನ್ನ ತಿರಸ್ಕರಿಸಿದ್ದಾಳೆ ಅನ್ನೋ ಅರ್ಥ ಅಲ್ಲ. ಆಕೆ ಶಿಕ್ಷಣ, ಉದ್ಯೋಗ, ಹಣ, ಪ್ರಯಾಣ, ಸಂಗಾತಿ, ಜೀವನದ ಆಯ್ಕೆಗಳ ಬಗ್ಗೆ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇರಬೇಕು ಅನ್ನೋದಷ್ಟೇ ಆಕೆಯ ಆಸೆ. ಇದೇ ಆಸೆಯನ್ನು ಪುರುಷ ಸಮಾಜ ತಪ್ಪು ಅನ್ನುವಂತೆ ನೋಡುತ್ತೆ.
ಈಗಿನ ಮಹಿಳೆಯರು ಉತ್ತಮ ವಿದ್ಯಾಭ್ಯಾಸ ಪಡೆದು ಆರ್ಥಿಕವಾಗಿ ಸದೃಢರಾಗಿ ಕುಟುಂಬದ ಜವಾಬ್ದಾರಿಯ ಜೊತೆಗೆ ಕೆಲಸದ ಒತ್ತಡವನ್ನು ನಿಭಾಯಿಸಿಕೊಂಡು ಹೋಗಿ ತಾನು ಗಳಿಸಿದ ಹಣವನ್ನು ತನ್ನ ಖುಷಿಗೋಸ್ಕರ ಖರ್ಚು ಮಾಡುವುದಕ್ಕೂ ಅನುಮತಿ ಕೇಳಬೇಕಾದಂತಹ ಪರಿಸ್ಥಿತಿ ಇದ್ದರು ಪುರುಷ ಸಮಾಜ ಇದನ್ನು ನಾವು ಕೊಟ್ಟ ಸ್ವಾತಂತ್ರ್ಯ ಅಂತ ಹೇಳಿಕೊಂಡು ಬೀಗುತ್ತಿದೆ.

ಮನೆಯ ಜವಾಬ್ದಾರಿ ಮಹಿಳೆಯೊಬ್ಬಳದ್ದೇ ಯಾಕೆ?
ಇನ್ನು ಕೆಲವು ಪುರುಷ ಸಮಾಜದಲ್ಲಿ ಮಹಿಳೆಗೆ ಉದ್ಯೋಗಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದೇವೆ ಅಂತ ಹೇಳಿ ಸಮಾನತೆಯ ಭಾಷಣ ಬಿಗಿತಾರೆ. ಆದ್ರೆ ಆ ಸಮಾನತೆ ಕೇವಲ ಒಬ್ಬ ಮಹಿಳೆಗೆ ಉದ್ಯೋಗಕ್ಕೆ ಹೋಗಲು ಅನುಮತಿ ಕೊಟ್ಟರಷ್ಟೇ ಸಾಕಾ? ಉದ್ಯೋಗಕ್ಕೆ ಹೋಗ್ತಿದ್ರು ಮನೆಯ ಕೆಲಸ ಕೂಡ ಆಕೆ ಮಾಡಿ ಹೋಗಬೇಕಾಗುತ್ತೆ. ಬೆಳಗ್ಗೆಯಿಂದ ರಾತ್ರಿ ತನಕ ಕೆಲಸ ಮಾಡಿದ್ರೂ ಮನೆ ನೋಡಿಕೊಳ್ಳುವುದು ಮಾತ್ರ ಅವಳ ಕರ್ತವ್ಯ ಅನ್ನೋ ನಿರೀಕ್ಷೆ ಎಲ್ಲರದ್ದು. ಕುಟುಂಬದ ಜವಾಬ್ದಾರಿ ಇಬ್ಬರದ್ದಾದರೆ ಮನೆ ಕೆಲಸವೂ ಇಬ್ಬರದ್ದೇ ಆಗಬೇಕಲ್ವಾ?
ಈ ಸ್ವತಂತ್ರ ಮಹಿಳೆಯನ್ನ ಅರ್ಥ ಮಾಡಿಕೊಳ್ಳುವ ಸಮಯ ಈಗ ಬಂದಿದೆ. ಸ್ವತಂತ್ರ ಕೇಳುವ ಪ್ರತಿಯೊಂದು ಹೆಣ್ಣು ಮಗಳು ಯಾವತ್ತಿಗೂ ತನ್ನ ಕುಟುಂಬದ ವಿರುದ್ಧ ನಿಂತಿಲ್ಲ. ತನ್ನ ಅಸ್ತಿತ್ವ ಕಾಪಾಡಿಕೊಳ್ಳೋಕೆ, ಪುರುಷನಿಲ್ಲದೆ ತನ್ನ ಕಾಲ ಮೇಲೆ ತಾನು ನಿಲ್ಲೋದಕ್ಕೆ, ಪುರುಷನಿಗೆ ಸಿಗುವಷ್ಟೇ ಪ್ರಾಧಾನ್ಯತೆ, ಅವಕಾಶಗಳನ್ನು ಪಡೆದುಕೊಳ್ಳಿದಕ್ಕೆ ಆಕೆ ಕಾಯುತ್ತಿದ್ದಾಳೆ ಅಷ್ಟೇ.
ಈ ಸಮಾಜದಲ್ಲಿ ಒಬ್ಬ ಹೆಣ್ಣುಮಗಳಿಗೆ ತನ್ನ ಸ್ವಾತಂತ್ರ್ಯ ಅನುಭವಿಸುವುದಕ್ಕೆ ಇನ್ನೊಬ್ಬರ ಅನುಮತಿ ಬೇಕು ಅನ್ನೋ ಮನಸ್ಥಿತಿ ಬದಲಾಗುವ ತನಕ ನಿಜವಾದ ಸಮಾನತೆ ಬರೋದಕ್ಕೆ ಖಂಡಿತ ಸಾಧ್ಯ ಇಲ್ಲ.
ಆಶಿಕಾ ಸಾಲೆತ್ತೂರು



