ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಕ್ಷಣಾ ಕ್ಷೇತ್ರವನ್ನು ‘ಆತ್ಮನಿರ್ಭರ’ ಮಾಡುವ ಕನಸು ಈಗ ನನಸಾಗುತ್ತಿದೆ. ಶೇಕಡಾ 100 ರಷ್ಟು ಭಾರತೀಯ ಕಚ್ಚಾವಸ್ತುಗಳು ಹಾಗೂ ಸ್ವದೇಶಿ ಬಿಡಿಭಾಗಗಳನ್ನು ಮಾತ್ರವೇ ಬಳಸಿ ತಯಾರಿಸಲಾದ ಅತ್ಯಾಧುನಿಕ ಎಕೆ-203 ಅಸಾಲ್ಟ್ ರೈಫಲ್‌ನ ಮೊದಲ ಆವೃತ್ತಿಯ ಫೈರಿಂಗ್ ಪರೀಕ್ಷೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸಂಪೂರ್ಣ ದೇಶೀಯ ಮಾದರಿಯ ರೈಫಲ್‌ಗೆ ಗೌರವಪೂರ್ವಕವಾಗಿ ‘ಶೇರ್’ ಎಂದು ಹೆಸರಿಸಲಾಗಿದೆ.

ಉತ್ತರ ಪ್ರದೇಶದ ಅಮೇಠಿಯಲ್ಲಿ ಸಿದ್ಧವಾದ ‘ಶೇರ್’
ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಕೋರ್ವಾ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಈ ಸಾಧನೆ ಮಾಡಿದೆ. ಭಾರತದ ‘ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್’ ಹಾಗೂ ‘ಮ್ಯುನಿಷನ್ಸ್ ಇಂಡಿಯಾ ಲಿಮಿಟೆಡ್’ ಸೇರಿ 50.5% ಪಾಲುದಾರಿಕೆ ಹೊಂದಿದ್ದರೆ, ರಷ್ಯಾದ ‘ರೊಸೊಬೊರೊನೆಕ್ಸ್ಪೋರ್ಟ್’ ಮತ್ತು ‘ಕಲಾಶ್ನಿಕೋವ್’ ಸಂಸ್ಥೆಗಳು 49.5% ಪಾಲು ಹೊಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಮಾರ್ಚ್ 3 ರಂದು ಈ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಅದ್ಭುತ ಸಾಮರ್ಥ್ಯ ಹಾಗೂ ನಿಖರತೆ
ಈ ರೈಫಲ್‌ನಲ್ಲಿ ಬಳಸಿರುವ ಪ್ರತಿಯೊಂದು ಸಣ್ಣ ಬಿಡಿಭಾಗವನ್ನೂ ಭಾರತೀಯ ಉದ್ಯಮಗಳಿಂದಲೇ ಸಂಗ್ರಹಿಸಿರುವುದು ವಿಶೇಷ.
- ಸಾಮರ್ಥ್ಯ: ಗ್ಯಾಸ್ ಆಧಾರಿತ 7.62×39 ಮಿಮೀ ಬಂದೂಕು.
- ವೇಗ: ನಿಮಿಷಕ್ಕೆ 700 ಸುತ್ತು ಗುಂಡುಗಳನ್ನು ಹಾರಿಸುವ ಕ್ಷಮತೆ.
- ಗುರಿ: 800 ಮೀಟರ್ ದೂರದಲ್ಲಿರುವ ವೈರಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ.
- ಉತ್ಪಾದನಾ ವೇಗ: ಪ್ರತಿ 100 ಸೆಕೆಂಡಿಗೆ ಒಂದು ಎಕೆ-203 ರೈಫಲ್ ತಯಾರಿಸುವ ಬೃಹತ್ ಗುರಿಯನ್ನು ಕಾರ್ಖಾನೆ ಹೊಂದಿದೆ.
ಸೇನಾ ಶಕ್ತಿಗೆ ಹೊಸ ಬಲ: ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಪೂರೈಕೆ
ಪ್ರಸ್ತುತ ಭಾರತೀಯ ಯೋಧರು ಬಳಸುತ್ತಿರುವ ಹಳೆಯ ‘ಇನ್ಸಾಸ್’ ರೈಫಲ್‌ಗಳ ಜಾಗದಲ್ಲಿ ಹಂತ-ಹಂತವಾಗಿ 6 ಲಕ್ಷಕ್ಕೂ ಅಧಿಕ ಎಕೆ-203 ರೈಫಲ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಅತ್ಯಂತ ವೇಗವಾಗಿ ಕೆಲಸ ಸಾಗುತ್ತಿರುವುದರಿಂದ, ನಿಗದಿತ ಅವಧಿಗಿಂತ ಒಂದು ವರ್ಷ ಮುಂಚಿತವಾಗಿಯೇ ಪೂರ್ಣ ಪ್ರಮಾಣದ ರೈಫಲ್‌ಗಳನ್ನು ಸೇನೆಗೆ ಹಸ್ತಾಂತರಿಸಲು ಸಿದ್ಧತೆ ನಡೆದಿವೆ. ಸೆಪ್ಟೆಂಬರ್ 2026ರ ವೇಳೆಗೆ ಈ ಸಂಪೂರ್ಣ ಸ್ವದೇಶಿ ರೈಫಲ್‌ಗಳು ಸೇನೆಯ ಪರೀಕ್ಷಾರ್ಥ ಪ್ರಯೋಗಕ್ಕೆ ಲಭ್ಯವಾಗಲಿವೆ ಎಂದು IRRPL ಸಿಇಒ ಮತ್ತು ಎಂಡಿ ಮೇಜರ್ ಜನರಲ್ ಎಸ್.ಕೆ. ಶರ್ಮಾ ತಿಳಿಸಿದ್ದಾರೆ.
ಯೋಧರಿಗೆ ಹೆಮ್ಮೆ, ದೇಶೀಯ ಉದ್ಯಮಕ್ಕೆ ಉತ್ತೇಜನ
ಈ ಯೋಜನೆಯು ಕೇವಲ ಶಸ್ತ್ರಾಸ್ತ್ರ ತಯಾರಿಕೆಗೆ ಸೀಮಿತವಾಗಿರದೆ, ಭಾರತೀಯ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಬೃಹತ್ ಅವಕಾಶಗಳನ್ನು ತಂದುಕೊಟ್ಟಿದೆ. ಸಂಪೂರ್ಣ ದೇಶೀಯ ತಂತ್ರಜ್ಞಾನ ಬಳಕೆಯಾಗಿರುವುದರಿಂದ ವಿದೇಶಗಳ ಮೇಲಿನ ಅವಲಂಬನೆ ತಪ್ಪಿದ್ದು, ನಮ್ಮ ಗಡಿ ಕಾಯುವ ಯೋಧರ ಕೈಗೆ ವಿಶ್ವದ ಅತ್ಯುತ್ತಮ ಹಾಗೂ ನಂಬಿಗಸ್ತ ಬಂದೂಕು ಸಿಗುವಂತಾಗಿದೆ.



