ತೂಕ ಇಳಿಸುವ ಜರ್ನಿಯಲ್ಲಿ ಸಿಹಿ ತಿನ್ನಬಾರದು ಎಂದು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡವರಿಗೆ ಈ ಸಿಹಿ. ಮೈದಾ ಮತ್ತು ಸಕ್ಕರೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಕೇವಲ ಬೆಲ್ಲ ಹಾಗೂ ಹೈ-ಪ್ರೊಟೀನ್ ಹೆಸರುಕಾಳಿನಿಂದ ಮಾಡುವ ಈ ಉಂಡೆ ನಿಮ್ಮ ಡಯಟ್ಗೆ ಪರ್ಫೆಕ್ಟ್ ಮ್ಯಾಚ್. ಇದನ್ನೂ ಹಬ್ಬದ ದಿನಗಳಲ್ಲೂ ಮಾಡಿ ಸವಿಯಬಹುದು.
ಬೇಕಾಗುವ ಸಾಮಗ್ರಿಗಳು
ಹೆಸರುಕಾಳು :1 ಕಪ್
ಬೆಲ್ಲ : 3/4 ಕಪ್
ತುಪ್ಪ : 4 ರಿಂದ 5 ಚಮಚ
ಏಲಕ್ಕಿ ಪುಡಿ : 1/ 2 ಚಮಚ
ಗೋಡಂಬಿ ಮತ್ತು ದ್ರಾಕ್ಷಿ
ಮಾಡುವ ವಿಧಾನ
ಮೊದಲು ಒಂದು ಬಾಣಲೆಯನ್ನು ಬಿಸಿ ಮಾಡಿ, ಅದಕ್ಕೆ ಹೆಸರುಕಾಳನ್ನು ಹಾಕಿ, ಸಣ್ಣ ಉರಿಯಲ್ಲಿ ಚನ್ನಾಗಿ ಹುರಿದುಕೊಳ್ಳಬೇಕು. ಕಾಳುಗಳು ತಿಳಿ ಕಂದು ಬಣ್ಣಕ್ಕೆ ಬಂದು, ಒಳ್ಳೆಯ ಸುವಾಸನೆ ಬರುವವರೆಗೆ ಹುರಿದುಕೊಂಡು ಅದು ನಂತರ ಅದನ್ನು ಆರಲು ಬಿಡಬೇಕು.
ಬಳಿಕ ಹೆಸರುಕಾಳನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಜರಡಿಯಿಂದ ಸೋಸಿಕೊಳ್ಳಬೇಕು. ನಂತರ ಅದೇ ಮಿಕ್ಸಿ ಜಾರಿಗೆ ಬೆಲ್ಲ ಹಾಕಿ ಪುಡಿ ಮಾಡಿ, ಹೆಸರುಕಾಳಿನ ಪುಡಿಯ ಜತೆ ಸೇರಿಸಿ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನೂ ಚನ್ನಾಗಿ ಕೈಯಿಂದ ಮಿಕ್ಸ್ ಮಾಡಬೇಕು.
ಬಳಿಕ ಒಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು, ರೆಡಿ ಮಾಡಿಟ್ಟುಕೊಂಡ ಮಿಶ್ರಣಕ್ಕೆ ಸೇರಿಸಿ ತಕ್ಷಣ ಕಲಸಬೇಕು. ನಂತರ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದುಕೊಂಡು ಉಂಡೆಗಳನ್ನು ಮಾಡಿದರೆ, ಹೆಸರುಕಾಳಿನ ಉಂಡೆ ಸಿದ್ಧ.



