August 23, 2026
Sunday, August 23, 2026
spot_img

ಕೊಪ್ಪಳದ ‘ಹಿಂಡು ದನ’ಕ್ಕೆ ಅಧಿಕೃತ ತಳಿ ಮಾನ್ಯತೆ: ಸ್ಥಳೀಯ ಜಾನುವಾರು ಸಂರಕ್ಷಣೆಗೆ ಹೊಸ ಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಲೆತಲಾಂತರಗಳಿಂದ ಕೊಪ್ಪಳ ಜಿಲ್ಲೆಯ ರೈತರು ಸಂರಕ್ಷಿಸಿಕೊಂಡು ಬಂದಿರುವ ವಿಶಿಷ್ಟ ಸ್ಥಳೀಯ ಜಾನುವಾರು ತಳಿಯಾದ ‘ಹಿಂಡು ದನ’ಕ್ಕೆ ಅಧಿಕೃತ ತಳಿ ಮಾನ್ಯತೆ ದೊರೆತಿದೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ಹಾಗೂ ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲ ಸಂಸ್ಥೆ (NBAGR) ಈ ಮಾನ್ಯತೆ ನೀಡಿದ್ದು, ಜಿಲ್ಲೆಯ ಪಶುಸಂಪತ್ತಿನ ಸಂರಕ್ಷಣೆ ಹಾಗೂ ತಳಿ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಮಹತ್ವದ ಬೆಳವಣಿಗೆಯಾಗಿದೆ.


ರಾಜ್ಯದಲ್ಲಿ ಈಗಾಗಲೇ ಅಮೃತ ಮಹಲ್, ಹಳ್ಳಿಕಾರ್, ಖಿಲ್ಲಾರ್, ದೇವಣಿ, ಮಲೆನಾಡ ಗಿಡ್ಡ ಹಾಗೂ ಕೃಷ್ಣವೇಣಿ ಸೇರಿದಂತೆ ಹಲವು ಸ್ಥಳೀಯ ಜಾನುವಾರು ತಳಿಗಳಿಗೆ ಅಧಿಕೃತ ಮಾನ್ಯತೆ ದೊರೆತಿದೆ. ಇದೀಗ ಕೊಪ್ಪಳದ ಹಿಂಡು ದನವೂ ಅಧಿಕೃತವಾಗಿ ಗುರುತಿಸಲ್ಪಟ್ಟ ತಳಿಗಳ ಸಾಲಿಗೆ ಸೇರ್ಪಡೆಯಾಗಿದೆ.

ನೈಸರ್ಗಿಕ ಮೇವಿನಲ್ಲೇ ಬದುಕುವ ಸಾಮರ್ಥ್ಯ

ಹಿಂಡು ದನಗಳ ಪ್ರಮುಖ ವಿಶೇಷತೆಯೆಂದರೆ ಅವುಗಳಿಗೆ ಹೆಚ್ಚಿನ ಪೂರಕ ಆಹಾರದ ಅಗತ್ಯವಿಲ್ಲದೆ ನೈಸರ್ಗಿಕ ಮೇವಿನ ಮೇಲೆಯೇ ಅವಲಂಬಿಸಿ ಬದುಕುವ ಸಾಮರ್ಥ್ಯ ಹೊಂದಿರುವುದು.

ಮೇಯಿಸುವ ಸಂದರ್ಭದಲ್ಲಿ ಈ ಜಾನುವಾರುಗಳು ಪ್ರತಿದಿನ ಸುಮಾರು 8ರಿಂದ 10 ಕಿಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿವೆ. ವಲಸೆ ಸಂದರ್ಭದಲ್ಲಿ ದಿನಕ್ಕೆ ಸುಮಾರು 30ರಿಂದ 35 ಕಿಲೋಮೀಟರ್ ವರೆಗೆ ಸಂಚರಿಸುವ ಸಾಮರ್ಥ್ಯವೂ ಇವುಗಳಿಗೆ ಇದೆ ಎಂದು ತಿಳಿಸಲಾಗಿದೆ. ಈ ರೀತಿಯ ಹೊಂದಾಣಿಕೆಯ ಗುಣಲಕ್ಷಣಗಳು ಒಣಹವಾಮಾನ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಪ್ರದೇಶಗಳಲ್ಲಿ ಸ್ಥಳೀಯ ಜಾನುವಾರು ತಳಿಗಳ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಐದು ವರ್ಷಗಳ ವೈಜ್ಞಾನಿಕ ಅಧ್ಯಯನ

ಹಿಂಡು ದನಕ್ಕೆ ತಳಿ ಮಾನ್ಯತೆ ಸುಲಭವಾಗಿ ದೊರೆತಿಲ್ಲ. ಸುಮಾರು ಐದು ವರ್ಷಗಳ ವೈಜ್ಞಾನಿಕ ಸಂಶೋಧನೆ ಹಾಗೂ ದೈಹಿಕ ಲಕ್ಷಣಗಳ ಅಧ್ಯಯನದ ಆಧಾರದ ಮೇಲೆ ಈ ಮಾನ್ಯತೆ ನೀಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ವಿನೋದ ಕುಮಾರ ದಿವಟರ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !