October 12, 2026
Monday, October 12, 2026
spot_img

ಅಮರಾವತಿಯ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಸ್ಫೋಟ: ಮೂರು ನವಜಾತ ಶಿಶುಗಳು ಸಾ*ವು, ಆರು ಮಕ್ಕಳ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಾರಾಷ್ಟ್ರದ ಅಮರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿದ್ದ ನವಜಾತ ಶಿಶುಗಳ ಘಟಕದಲ್ಲಿ ವೆಂಟಿಲೇಟರ್‌ ಸ್ಫೋಟಗೊಂಡಿದ್ದು, ಮೂರು ನವಜಾತ ಶಿಶುಗಳು ಮೃತಪಟ್ಟಿದ್ದು, ಆರಕ್ಕೂ ಹೆಚ್ಚು ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಆಗಿದ್ದೇನು?

ಬೆಳಗಿನ ಜಾವ ಮೂರು ಗಂಟೆಯಲ್ಲಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿದ್ದ ನವಜಾತ ಶಿಶುಗಳ ಆರೈಕೆ ಘಟಕದಲ್ಲಿ ವೆಂಟಿಲೇಟರ್‌ ಸ್ಫೋಟಗೊಂಡು ಬೆಂಕಿ ಹೊತ್ತಿದೆ. ಕೆಲವೇ ನಿಮಿಷದಲ್ಲಿ ಇಡೀ ಫ್ಲೋರ್‌ಗೆ ದಟ್ಟ ಹೊಗೆ ಆವರಿಸಿದೆ. ಈ ಸಮಯದಲ್ಲಿ ವಾರ್ಡ್‌ನಲ್ಲಿ 39 ನವಜಾತ ಶಿಶುಗಳು ಇದ್ದವು. ತೀವ್ರ ಸುಟ್ಟ ಗಾಯ ಹಾಗೂ ಉಸಿರಾಡಲು ಆಗದೇ ಮೂರು ಕಂದಮ್ಮಗಳು ಕ್ಷಣದಲ್ಲೇ ಪ್ರಾಣಬಿಟ್ಟಿವೆ ಎಂದು ತಿಳಿದುಬಂದಿದೆ.

ಮಕ್ಕಳನ್ನು ಬದುಕಿಸಿಕೊಡಿ

ಹೊಗೆಯನ್ನು ಕಂಡ ತಕ್ಷಣ ವೈದ್ಯರು ಹಾಗೂ ನರ್ಸ್‌ಗಳ ವಾರ್ಡ್‌ಗೆ ಧಾವಿಸಿ ಇನ್ನುಳಿದ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಆದರೂ ಆರು ಮಕ್ಕಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳಾಗಿದ್ದು, ನವಜಾತ ಶಿಶುಗಳನ್ನು ಹತ್ತಿರದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರ್ಷಗಳ ನಂತರ ಮಕ್ಕಳನ್ನು ಕಂಡಿದ್ದ ಪೋಷಕರು ಕಂಗಾಲಾಗಿದ್ದಾರೆ. ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಕಂದನನ್ನು ಬದುಕಿಸಿಕೊಡಿ ಎಂದು ಗಳಗಳನೆ ಅತ್ತಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Must Read