ಹೊಸದಿಗಂತ ವರದಿ ಕಾರವಾರ:
ಗೋವಾ ರಾಜ್ಯದಲ್ಲಿ ಭೂ ಅಕ್ರಮ, ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಮುಂಜಾನೆ ನಗರದ ಕೋಡಿಭಾಗದ ಮನೆಯೊಂದರ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೋಡಿಭಾಗದ ಅಬಕಾರಿ ಕಚೇರಿ ಎದುರು ಇರುವ ಮಿಡ್ ಮ್ಯಾಕ್ ಆರ್ಕೀಡ್ ಅಪಾರ್ಟ್‌ಮೆಂಟಿನ ನಾಲ್ಕು ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ದಾಳಿ ನಡೆದಿದೆ.
ದಾಳಿ ನಡೆಸಲಾಗಿರುವ ನಾಲ್ಕು ಪ್ಲಾಟ್ ಗಳು ಶಿವಮೊಗ್ಗ ಮೂಲದ ಸುಲೇಮಾನ್ ಖಾನ್ ಯಾನೆ ಸಿದ್ದೀಕ್ ಖಾನ್ ಎನ್ನುವವರಿಗೆ ಸೇರಿದ್ದಾಗಿದ್ದು, ಈ ಪ್ಲಾಟುಗಳ ಖರೀದಿಗೆ ಹಣದ ಮೂಲ ಮತ್ತು ಗೋವಾ ರಾಜ್ಯದಲ್ಲಿ ನಡೆದಿರುವ ಅಕ್ರಮ ಅವ್ಯವಹಾರಗಳಿಗೂ ಈ ಪ್ಲಾಟುಗಳ ಖರೀದಿಗೂ ಏನಾದರೂ ಸಂಬಂಧ ಇದೆಯೇ ಎನ್ನುವ ಕುರಿತಂತೆ ವಿಚಾರಣೆ ನಡೆದಿದೆ.
ಇದನ್ನೂ ಓದಿ:
ಕಾರವಾರದಲ್ಲಿ ಸುಮಾರು ಐದು ವರ್ಷಗಳಿಗೂ ಹೆಚ್ಚಿನ ಕಾಲ ವಾಸವಾಗಿದ್ದ ಸುಲೇಮಾನ ಖಾನ್ ಗೋವಾದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಲ್ಲಿ ಮೃತರ ಆಸ್ತಿಗಳನ್ನು ಕಬಳಿಸಿದ ಆರೋಪಗಳಿದ್ದು 2024 ರಲ್ಲಿ ಗೋವಾದಲ್ಲಿ ಎಸ್.ಐ.ಟಿ ತಂಡದಿಂದ ಬಂಧಿಸಲ್ಪಟ್ಟ ಸುಲೇಮಾನ್ ಜೈಲಿನಿಂದ ತಪ್ಪಿಸಿಕೊಂಡು ಕೇರಳದಲ್ಲಿ ಸಿಕ್ಕಿಬಿದ್ದಿದ್ದ.
ಅಕ್ರಮ ಹಣದ ಮೂಲಕ ಸುಮಾರು 300 ಕೋಟಿಗಳಿಗಿಂತ ಹೆಚ್ಚಿನ ಮೌಲ್ಯದ 25 ಹೆಕ್ಟರುಗಳಷ್ಟು ಜಮೀನು ಖರೀದಿಸಿರುವ ಆರೋಪ ಸುಲೇಮಾನ್ ಮೇಲಿದ್ದು ಗೋವಾದಲ್ಲಿ ಭೂ ಅಕ್ರಮ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ಎದುರಿಸುತ್ತಿರುವ ಆತನನ್ನು ಜುಲೈ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು.
ಸುಲೇಮಾನ ಖಾನ್ ಅಕ್ರಮ ಹಣ ಭೂಮಿ ಖರೀದಿ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ಕಾರವಾರದಲ್ಲಿ ಸುಲೇಮಾನ ಖಾನ್ ಮನೆಗಳ ಮೇಲೆ ದಾಳಿ ನಡೆಸಿದೆ.



