August 25, 2026
Tuesday, August 25, 2026
spot_img

ದೆಹಲಿ, ಜಾರ್ಖಂಡ್ ಬಳಿಕ ಈಗ ಬಿಹಾರದಲ್ಲಿ ಪರೀಕ್ಷಾ ಅಕ್ರಮದ ಕಿಡಿ: BPSC ಪರೀಕ್ಷೆ ರದ್ದತಿಗೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊದಲು ದೆಹಲಿ, ನಂತರ ಜಾರ್ಖಂಡ್, ಈಗ ಬಿಹಾರದಲ್ಲೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಸ್ಫೋಟಗೊಂಡಿದೆ. 70ನೇ ಬಿಹಾರ ಸಾರ್ವಜನಿಕ ಸೇವಾ ಆಯೋಗದ (BPSC) ಪರೀಕ್ಷೆಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಮಂಗಳವಾರ ಪಟ್ನಾದ ಗಾಂಧಿ ಮೈದಾನದಿಂದ ರಾಜಭವನದ ಕಡೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರು ಅಳವಡಿಸಿದ್ದ ಭದ್ರತಾ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಮತ್ತು ಅಭ್ಯರ್ಥಿಗಳ ನಡುವೆ ಘರ್ಷಣೆ ಸಂಭವಿಸಿದೆ.

ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳು

ಪ್ರತಿಭಟನಾಕಾರರು ಕೇವಲ ಬಿಪಿಎಸ್‌ಸಿ ಪರೀಕ್ಷೆ ರದ್ದತಿಗೆ ಮಾತ್ರವಲ್ಲದೆ, ಇಡೀ ನೇಮಕಾತಿ ವ್ಯವಸ್ಥೆಯ ಸುಧಾರಣೆಗಾಗಿ ಆಗ್ರಹಿಸಿದ್ದಾರೆ.

ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು (TRE-4) ರಾಜ್ಯಾದ್ಯಂತ ಎರಡು ಹಂತಗಳಲ್ಲಿ ನಡೆಸುವ ಪ್ರಸ್ತಾವನೆಗೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪರೀಕ್ಷೆಯನ್ನು ಒಂದೇ ಹಂತದಲ್ಲಿ ನಡೆಸಬೇಕು ಮತ್ತು ತಕ್ಷಣವೇ ಅಧಿಕೃತ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ನೇಮಕಾತಿ ಪರೀಕ್ಷೆಯಲ್ಲಿರುವ ನೆಗೆಟಿವ್ ಮಾರ್ಕಿಂಗ್ಪದ್ಧತಿಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು.

ಬಿಹಾರ ಸಿಬ್ಬಂದಿ ಆಯ್ಕೆ ಆಯೋಗ (BSSC) ಮತ್ತು ಸಬ್-ಇನ್ಸ್ಪೆಕ್ಟರ್ (SI) ನೇಮಕಾತಿ ಪ್ರಕ್ರಿಯೆಗಳಲ್ಲಿನ ಭ್ರಷ್ಟಾಚಾರವನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಕೀಯ ಬೆಂಬಲ

ಪ್ರತಿಭಟನಾ ಸ್ಥಳದಲ್ಲಿದ್ದ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕಳೆದ 9 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಭರವಸೆ ನೀಡಿಲ್ಲ ಎಂದು ಆರೋಪಿಸಿದರು. ಇದೇ ವೇಳೆ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಪತ್ರ ಬರೆದಿದ್ದು, ಪ್ರತಿಭಟನಾಕಾರರ ಬೇಡಿಕೆಗಳನ್ನು ನಿರ್ಲಕ್ಷಿಸದೆ ತಕ್ಷಣವೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ತೇಜಸ್ವಿ ಯಾದವ್ ಅವರ ಆರ್‌ಜೆಡಿ ಪಕ್ಷ ಸೇರಿದಂತೆ ಒಟ್ಟು 14 ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಘೋಷಿಸಿವೆ.

ಪರೀಕ್ಷಾ ನಿಯಂತ್ರಕರ ವಿವಾದಾತ್ಮಕ ಹೇಳಿಕೆಗೆ ತೇಜಸ್ವಿ ಕಿಡಿ

ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಬಿಪಿಎಸ್‌ಸಿ ಪರೀಕ್ಷಾ ನಿಯಂತ್ರಕ ರಾಜೇಶ್ ಕುಮಾರ್ ಅವರು, ಆನೆ ಬೀದಿಯಲ್ಲಿ ಸಾಗುವಾಗ ಸಾವಿರ ನಾಯಿಗಳು ಬೊಗಳುತ್ತವೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ತೇಜಸ್ವಿ ಯಾದವ್, ಅಧಿಕಾರಿಯ ಈ ಮಾತುಗಳು ಮುಖ್ಯಮಂತ್ರಿಗಳ ಭಾಷೆಯನ್ನೇ ಪ್ರತಿಬಿಂಬಿಸುತ್ತಿವೆ. ವಿದ್ಯಾರ್ಥಿಗಳನ್ನು ಅವಮಾನಿಸಿದ ಈ ಅಧಿಕಾರಿಯನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಿ, ಕ್ಷಮೆಯಾಚಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

‘ವಿದ್ಯಾರ್ಥಿ ಸಹಯೋಗ್ ಶಿಬಿರ’ ಘೋಷಣೆ

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಲು ಇಂದಿನಿಂದಲೇ ಮಾಸಿಕ ‘ವಿದ್ಯಾರ್ಥಿ ಸಹಯೋಗ್ ಶಿಬಿರ’ ಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಪ್ರತಿ ತಿಂಗಳ ನಾಲ್ಕನೇ ಮಂಗಳವಾರ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಶಿಬಿರಗಳನ್ನು ಆಯೋಜಿಸಲಾಗುವುದು ಮತ್ತು ವಿದ್ಯಾರ್ಥಿಗಳು ಹೆಲ್ಪ್‌ಲೈನ್ ಸಂಖ್ಯೆ 1100 ಹಾಗೂ ಆನ್‌ಲೈನ್ ಪೋರ್ಟಲ್ ಮೂಲಕವೂ ದೂರು ದಾಖಲಿಸಿ ಅದರ ಸ್ಥಿತಿಗತಿಯನ್ನು ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !